ತಿರುಪತಿ: ಆಂಬ್ಯುಲೆನ್ಸ್ ನಿರ್ವಾಹಕರು ಮೃತದೇಹವನ್ನು ಕೊಂಡೊಯ್ಯಲು ಭಾರಿ ಮೊತ್ತ ಕೇಳಿದ್ದು ಮೊದಲೇ ಮಗನ ಸಾವಿನಿಂದ ನೊಂದಿದ್ದ ತಂದೆ ಮಗನ ಶವವನ್ನು ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್ ನಲ್ಲಿ ಕೊಂಡೊಯ್ದ ದಾರುಣ ಘಟನೆ ನಡೆದಿದೆ.
ತಿರುಪತಿಯ ಎಸ್‌ವಿಆರ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಯ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರು ಇಂದು ಮುಂಜಾನೆ ಆಂಬ್ಯುಲೆನ್ಸ್ ಬಾಡಿಗೆಗೆ ಬೆಲೆಯನ್ನು ಕಡಿಮೆ ಮಾಡಲು ನಿರಾಕರಿಸಿದರು. ಇದರಿಂದ ದಿಕ್ಕು ತೋಚದ ತಂದೆ ಬೇರೆ ದಾರಿಯಿಲ್ಲದೆ ತನ್ನ ಮಗನನ್ನು ಮೋಟಾರ್‌ಸೈಕಲ್‌ನಲ್ಲಿ ಕೈಯಲ್ಲಿ ಹಿಡಿದುಕೊಂಡು ಹೋಗಿದ್ದಾರೆ. ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದ್ದು ಜಿಲ್ಲಾ ಅಧಿಕಾರಿಗಳು ತನಿಖೆಗೆ ಸೂಚಿಸಿದ್ದಾರೆ. ಘಟನೆಗೆ ಕಾರಣರಾದ ಆರು ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
A father was forced to take body of his son, who died of #kidney failure, on a motorcycle to his village 90 km away from #Tirupati on Tuesday early hours, when private ambulance operator at #Ruia govt hospital, refused to reduce their high price @NewIndianXpress pic.twitter.com/BaAcpRL7mH
— TNIE Andhra Pradesh (@xpressandhra) April 26, 2022
ಅನ್ನಮಯ್ಯ ಜಿಲ್ಲೆಯ ಚಿತ್ವೇಲ್‌ನ ಜೇಸೇವಾ ಅವರನ್ನು ಕಿಡ್ನಿ ಸಂಬಂಧಿ ಕಾಯಿಲೆಯಿಂದ ತಿರುಪತಿಯ ಎಸ್‌ವಿಆರ್ ರುಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ತಡರಾತ್ರಿ ಜೇಸೇವಾ ಮೃತಪಟ್ಟಿದ್ದನು.
ಚಿಟ್ವೇಲ್ ನಿವಾಸಿ ಶ್ರೀಕಾಂತ್ ಯಾದವ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದು, ಶವವನ್ನು ಉಚಿತವಾಗಿ ಸ್ಥಳಾಂತರಿಸಲು ಒಪ್ಪಿಕೊಂಡರು. ಆದರೆ, ಆಸ್ಪತ್ರೆಯಲ್ಲಿದ್ದ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರು, ಸಿಂಡಿಕೇಟ್ ರಚಿಸಿ ಮತ್ತೊಂದು ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಪ್ರವೇಶಿಸದಂತೆ ತಡೆದು ಓಡಿಸಿದರು. ಆಂಬ್ಯುಲೆನ್ಸ್‌ನಲ್ಲಿ ಶವ ಸ್ಥಳಾಂತರಿಸುವುದಾದರೆ ಅದು ತಮ್ಮದಾಗಬೇಕು ಎಂದು ಪಟ್ಟು ಹಿಡಿದರು. ತನ್ನ ಸಂಬಂಧಿಕರ ಸಹಾಯದಿಂದ, ಜೀಸೇವಾ ತಂದೆ ತನ್ನ ಮಗನ ಶವವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ತಿರುಪತಿ ಸಂಸದ ಮಡ್ಡಿಲ ಗುರುಮೂರ್ತಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆರ್‌ಡಿಒ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discussion about this post