ಲಂಡನ್: ಅಫ್ಗಾನಿಸ್ತಾನದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದತ್ತ ಬರುತ್ತಿರುವವರನ್ನು ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಬ್ರಿಟನ್ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿದೇಶಾಂಗ ಇಲಾಖೆಯು, ʼಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯು ಅತಂತ್ರವಾಗಿದೆ. ಭಯೋತ್ಪಾದಕರ ದಾಳಿ ಬೆದರಿಕೆ ಇರುವುದರಿಂದ ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳದಿರಿ. ಒಂದು ವೇಳೆ ನೀವು ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ, ಸುರಕ್ಷಿತ ಪ್ರದೇಶಗಳತ್ತ ತೆರಳಿ. ಮುಂದಿನ ಸೂಚನೆಗಳು ಬರುವವರೆಗೆ ಅಲ್ಲಿಯೇ ಇರಿʼ ಎಂದು ಬುಧವಾರ ತಡರಾತ್ರಿ ಸೂಚನೆ ನೀಡಿತ್ತು.
ಈ ಸಂಬಂಧ ಬಿಬಿಸಿ ರೆಡಿಯೊಗೆ ಮಾತನಾಡಿರುವ ಸಚಿವ, ʼಅತ್ಯಂತ ವಿಶ್ವಾಸಾರ್ಹʼ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಐಎಸ್ ಸಂಘಟನೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಲಿದ್ದಾರೆ ಎಂಬುದು ಖಚಿತವಾಗಲಿದೆʼ ಎಂದಿದ್ದಾರೆ.
ʼಬೆದರಿಕೆ ತೀವ್ರವಾಗಿದೆ ಎಂದು ಮಾತ್ರವೇ ನಾವು ಹೇಳಬಲ್ಲೆವು. ಅಲ್ಲಿರುವವರನ್ನು ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂದೆ ನಮಗೆ ಬರುವ ವರದಿಗಳನ್ನು ಆಧರಿಸಿ ಸಲಹೆಗಳೂ ಬದಲಾಗಬಹುದು. ಆದರೆ, ಅದಕ್ಕೆ ಯಾವುದೇ ಖಾತರಿ ಇಲ್ಲʼ ಎಂದು ಹೆಪ್ಪಿ ಎಚ್ಚರಿಸಿದ್ದಾರೆ.
ಅಫ್ಗಾನಿಸ್ತಾನದಲ್ಲಿರುವ ತನ್ನ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಆಗಸ್ಟ್ 31ರ ಗಡುವನ್ನು ಪಾಲಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು ಜಿ-7 ರಾಷ್ಟ್ರಗಳ ನಾಯಕರು ಬುಧವಾರ ಸಭೆ ನಡೆಸಿದ್ದರು. ಈ ವೇಳೆ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಗಡುವನ್ನು ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ನಿಗದಿತ ಗಡುವಿಗೆ ಬದ್ಧವಾಗಿರುವುದಾಗಿ ಬೈಡನ್ ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post