ಬೆಂಗಳೂರು: ಹೊಂಬಾಳೆ ಫಿಲಂಸ್ನಡಿ ವಿಜಯ್ಕುಮಾರ್ ಕಿರಗಂದೂರು ನಿರ್ಮಾಣದಲ್ಲಿ ರಿಷಭ್ ಶೆಟ್ಟಿ, ‘ಕಾಂತಾರ’ ಎಂಬ ಹೊಸ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಶುಕ್ರವಾರ ಈ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತವಾಗಿದೆ.
ಹೌದು, ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ 2:21ರ ಶುಭಘಳಿಗೆಯಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ರಿಷಭ್, ವಿಜಯ್ ಕುಮಾರ್ ಕಿರಗಂದೂರು ಸೇರಿದಂತೆ ಹಲವರು ಭಾಗವಹಿಸಿದ್ದರು.
‘ಕಾಂತಾರ’ ಚಿತ್ರವನ್ನು ರಿಷಭ್ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಚಿತ್ರದಲ್ಲಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ‘ಪಾಪ್ಕಾರ್ನ್ ಮಂಕಿ ಟೈಗರ್’ ಖ್ಯಾರಿಯ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಮಿಕ್ಕಂತೆ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ.
ಶನಿವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕೆರಾಡಿ ಮತ್ತು ಹೆಮ್ಮಾಡಿ ಸುತ್ತಮುತ್ತ ನಡೆಯಲಿದೆ. ಈ ವರ್ಷಾಂತ್ಯದೊಳಗೆ ಚಿತ್ರೀಕರಣ ಮುಗಿಯಲಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.