ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಓಮ್ನಿ ಕಾರು ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೇರಳ ಹಾಗೂ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳದ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ. (25), ಮೊಹಮ್ಮದ್ ಆಸೀಕ್ (25), ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ. (24) ಬಂಧಿತ ಆರೋಪಿಗಳು.
ದಿನಾಂಕ 19-06-2026 ರಿಂದ 20-06-2026ರ ಅವಧಿಯಲ್ಲಿ ಮಾಡ್ನೂರು ಕಾವು ಎಂಬಲ್ಲಿ ಓಮ್ನಿ ಕಾರೊಂದು ಕಳ್ಳತನವಾಗಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 94/2026, ಕಲಂ 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಗುಣಪಾಲ ಜೆ. ಮತ್ತು ಪಿಎಸ್‌ಐ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದ ತಂಡವು ತನಿಖೆ ಕೈಗೆತ್ತಿಕೊಂಡಿತ್ತು. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸತತ ಶೋಧ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಕಾರು ಆಂಬ್ಯುಲೆನ್ಸ್ ಆಗಿ ಪರಿವರ್ತನೆ: ಬಂಧಿತರಿಂದ ಅಂದಾಜು 2.5 ಲಕ್ಷ ರೂ. ಮೌಲ್ಯದ ಕಳ್ಳತನವಾದ ಓಮ್ನಿ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಲಕ್ಷ ರೂ. ಮೌಲ್ಯದ ಕೆಟಿಎಂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪುತ್ತೂರಿನಲ್ಲಿ ಕಾರು ಕದ್ದು ಕೇರಳಕ್ಕೆ ಸಾಗಿಸಿ, ಅಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡಿದ್ದರು. ಬಳಿಕ ತಮಿಳುನಾಡಿನಲ್ಲಿ ಆ ಕಾರನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿರುವುದು ತನಿಖೆಯ ವೇಳೆ ಬಯಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಕೇರಳದ ಬದಿಯಡ್ಕ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post