ಕಡಬ ಆ.25 : ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಲಾಭದ ಆಮಿಷ ತೋರಿಸಿ, ರಿಯಾಯಿತಿ ದರದಲ್ಲಿ ಬೆಲೆಬಾಳುವ ವಸ್ತುಗಳ ಖರೀದಿ ಹಾಗೂ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಕಡಬ ಪೊಲೀಸರು ದಾಳಿ ನಡೆಸಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಆ.23ರಂದು ಸಾರ್ವಜನಿಕರನ್ನು ಸೇರಿಸಿ ಸಭೆ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಹಾವೇರಿ ಮೂಲದ ‘ಕಿಂಗ್ಸ್ ಬಜಾರ್’ ಸಂಸ್ಥೆಯ ಹೆಸರಿನಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸಿ ಹಣ ಹೂಡಿಕೆ ಮಾಡಿಸುತ್ತಿರುವುದು ಕಂಡುಬಂದಿದೆ. ಗುಪ್ತ ಸಭೆ ನಡೆಸುತ್ತಿರುವ ಬಗ್ಗೆ ಕಡಬ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸಾರ್ವಜನಿಕರಿಗೆ ಯೋಜನೆಯ ಸ್ವರೂಪ, ಸದಸ್ಯತ್ವ ಹಾಗೂ ಹೂಡಿಕೆಯಿಂದ ಯಾವ ರೀತಿ ಲಾಭ ದೊರೆಯಲಿದೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಹಣ ಹೂಡಿಕೆಗೆ ಭಾರಿ ಲಾಭದ ಆಮಿಷ : ಸಂಸ್ಥೆಗೆ ಸದಸ್ಯರಾಗಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು, ರಿಯಾಯಿತಿ ದರದಲ್ಲಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು ಹಾಗೂ ಹೊಸ ಸದಸ್ಯರನ್ನು ಸೇರಿಸಿದರೆ ಪ್ರತಿದಿನ ಕಮಿಷನ್ ಪಡೆಯಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸುತ್ತಿದ್ದರು. ಸ್ಥಳೀಯವಾಗಿ ಕೆಲವರನ್ನು ಏಜೆಂಟರನ್ನಾಗಿ ಬಳಸಿಕೊಂಡು ಸದಸ್ಯರ ಸೇರ್ಪಡೆ ಮತ್ತು ಹಣ ಸಂಗ್ರಹಿಸುವ ಚಟುವಟಿಕೆ ನಡೆಸಲಾಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಂಟು ಮಂದಿ ವಿರುದ್ಧ ಪ್ರಕರಣ: ಪ್ರಕರಣದಲ್ಲಿ ಕಿಂಗ್ಸ್ ಬಜಾರ್ ಸಂಸ್ಥೆಯ ಮಾಲೀಕರು/ಸಂಸ್ಥೆಯನ್ನು ಮೊದಲ ಆರೋಪಿಯನ್ನಾಗಿ ದಾಖಲಿಸಲಾಗಿದ್ದು, ಕೊಕ್ಕಡ, ಪುತ್ತೂರು ಮತ್ತು ಕಡಬ ಮೂಲದವರಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50), ಗುರುಮೂರ್ತಿ (54), ಸುರೇಶ್ ಆರ್. (55), ಬಾಲಕೃಷ್ಣ ಪಿ.ಹೆಚ್. (42), ಕಿರಣ್ ಕುಮಾರ್ (21), ಶ್ರೀನಾಥ್ (48) ಹಾಗೂ ಸಂದೇಶ್, ಇವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026ರಂತೆ Prize Chits and Money Circulation Schemes (Banning) Act, 1978ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಸ್ವಯಂಪ್ರೇರಿತ (Suo Moto) ಪ್ರಕರಣ ದಾಖಲಿಸಲಾಗಿದೆ. ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಹಣದ ವಹಿವಾಟಿನ ಪ್ರಮಾಣ, ಸಂಸ್ಥೆಯ ಕಾರ್ಯವೈಖರಿ, ಸ್ಥಳೀಯ ಏಜೆಂಟರ ಪಾತ್ರ ಹಾಗೂ ಈ ಜಾಲಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post