ಬಂಟ್ವಾಳ: ತಾಲೂಕಿನ ಪೆರ್ನೆ ಗ್ರಾಮದ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಆಗಸ್ಟ್ 21ರಂದು ಬೆಳಗ್ಗೆ 11.09ರ ಸುಮಾರಿಗೆ ನಡೆದಿದೆ.
ಗಡಿಯಾರ ನಿವಾಸಿ ಅಬೂಬಕ್ಕರ್ ಅವರು ಸ್ಕೂಟರ್‌ನಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ವೇಳೆ ಪೆರ್ನೆ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಹಿಟಾಚಿ ಯಂತ್ರದ ಆಪರೇಟರ್ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಅಳವಡಿಸದೆ ರಸ್ತೆ ಕಾಮಗಾರಿ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಆಪರೇಟರ್ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ರಸ್ತೆ ಕಾಮಗಾರಿ ವೇಳೆ ಹಿಟಾಚಿ ಯಂತ್ರದ ಮಣ್ಣು ಅಗೆಯುವ ಕೊಂಡಿ ಏಕಾಏಕಿ ರಸ್ತೆಯ ಭಾಗಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಕೂಟರ್ ಸವಾರ ಅಬೂಬಕ್ಕರ್ ಅವರು ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಅನ್ನು ಏಕಾಏಕಿ ರಸ್ತೆಯ ಮಧ್ಯಭಾಗಕ್ಕೆ ತಿರುಗಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಗ್ಯಾಸ್ ಸಿಲಿಂಡರ್ ಹಿಂಬದಿಯಿಂದ ಬರುತ್ತಿದ್ದ ದೇವಿಪ್ರಸಾದ್ ಅವರು ಚಲಾಯಿಸುತ್ತಿದ್ದ ಕಾರಿಗೆ ಬಡಿದಿದ್ದು, ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮ ಕಾರು ಹಾಗೂ ಸ್ಕೂಟರ್‌ಗೆ ಹಾನಿಯಾಗಿದ್ದು, ಸ್ಕೂಟರ್ ಸವಾರ ಅಬೂಬಕ್ಕರ್ ಅವರಿಗೂ ಗಾಯಗಳಾಗಿವೆ. ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಬೂಬಕ್ಕರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಹಿಟಾಚಿ ಆಪರೇಟರ್ ವಾಹನದ ಚಾವಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸ್ಕೂಟರ್ ಸವಾರನ ಸಂಬಂಧಿಕರು ರಸ್ತೆ ಕಾರ್ಮಿಕರು ಹಾಗೂ ಹಿಟಾಚಿ ಆಪರೇಟರ್‌ಗೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಕಾರಣವಾದ ರಸ್ತೆ ಕಾಮಗಾರಿ, ಸುರಕ್ಷತಾ ಕ್ರಮಗಳ ಕೊರತೆ ಹಾಗೂ ಘಟನೆಯ ನಂತರ ನಡೆದಿರುವ ಹಲ್ಲೆಯ ಆರೋಪಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
Discover more from Coastal Times Kannada
Subscribe to get the latest posts sent to your email.








Discussion about this post