ಮಂಗಳೂರು: ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (ಎಇಪಿಎಸ್)ಮೂಲಕ ಒಂದು ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ವೇಳೆ ನೀಡುವ ಬಯೋಮೆಟ್ರಿಕ್, ಮುದ್ರಾಂಕ ಇಲಾಖೆಯ ವೆಬೈಸೈಟ್‌ನಲ್ಲಿ ದಾಖಲಾಗುವ ಆಧಾರ್ ಮಾಹಿತಿಯನ್ನು ಬಳಸಿ ಈ ರೀತಿ ವಂಚನೆಯಾಗಿರುವ ಸಾಧ್ಯತೆ ಇದೆ ಎಂಬ ಸಂದೇಹ ವ್ಯಕ್ತವಾಗಿದೆ.
ಕುಲಶೇಖರ ನಿವಾಸಿ ಲೋಕೇಶ್ ಎಂಬವರು ಆಗಸ್ಟ್ 30ರಂದು ಜಾಗ ಖರೀದಿ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಪತಿ- ಪತ್ನಿಯ ಜಂಟಿ ಖಾತೆಯ ಹೆಸರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು, ಇಬ್ಬರೂ ತಮ್ಮ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿದ್ದರು. ಸೆ.13ರಂದು ಲೋಕೇಶ್ ಮತ್ತು ಅವರ ಪತ್ನಿಯ ಖಾತೆಯಿಂದ ತಲಾ ಹತ್ತು ಸಾವಿರ ರೂ. ಹಣ ಕಡಿತಗೊಂಡಿತ್ತು. ಯಾವುದೇ ಫೋನ್ ಕರೆಯಾಗಲೀ, ಓಟಿಪಿ ಆಗಲೀ ಅವರಿಗೆ ಬಂದಿರಲಿಲ್ಲ. ಐದು ನಿಮಿಷಗಳ ಅಂತರದಲ್ಲಿ ಪತಿ- ಪತ್ನಿಯ ಬೇರೆ ಬೇರೆ ಬ್ಯಾಂಕಿನ ಖಾತೆಗಳಿಂದ ಹಣ ಕಟ್ ಆಗಿತ್ತು. ಆನಂತರ, ಇಬ್ಬರು ಕೂಡ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗಿರುವ ಬಗ್ಗೆ ಮೊಬೈಲಿಗೆ ಮೆಸೇಜ್ ಬಂದಿತ್ತು. ಎರಡರಲ್ಲೂ ಎಇಪಿಎಸ್ ಮೂಲಕ ಹಣ ಕಟ್ ಆಗಿರುವುದಾಗಿ ಮೆಸೇಜ್ ಇತ್ತು ಎಂದು ಲೋಕೇಶ್ ತಿಳಿಸಿದ್ದಾರೆ.
“ದೂರುದಾರರು ನಿರ್ದಿಷ್ಟವಾಗಿ ಸಬ್‌ರಿಜಿಸ್ಟ್ರಾರ್ ಕಚೇರಿಯ ಮೂಲಕವೇ ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಸೈಬರ್ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
Discussion about this post