ಮಂಗಳೂರು: ಕೋವಿಡ್ ಲಸಿಕೆ ಪಡೆಯದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರ ಆದೇಶವನ್ನು ಹಿಂಪಡೆಯಬೇಕು ಎಂದು ಇಲ್ಲಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ಇಂಥ ಆದೇಶಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಲಸಿಕೆ ಪಡೆಯುವ ಬಗ್ಗೆ ರೂಪಿಸಿರುವ ನೀತಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿವೆ. ಲಸಿಕೆ ಹಾಕಿಸಿಕೊಳ್ಳದವರನ್ನು ಅಪರಾಧಿಗಳಂತೆ ಬಿಂಬಿಸಿ ಸಮಾಜದಿಂದ ಹೊರಗುಳಿಸುವ ಕೆಲಸ ಆಗುತ್ತಿದೆ. ಲಸಿಕೆ ಪಡೆಯುವುದು ಐಚ್ಛಿಕವೆಂದು ಕೇಂದ್ರ ಸರ್ಕಾರ ಹಲವಾರು ಬಾರಿ ಸ್ಪಷ್ಟಪಡಿಸಿದೆ. ಈ ಸಂಬಂಧ ಹೈಕೋರ್ಟ್‌ಗೆ ಸಹ ಹೇಳಿಕೆ ಸಲ್ಲಿಸಿದೆ’ ಎಂದಿದ್ದಾರೆ.
‘ಸರ್ಕಾರವೇ ಲಸಿಕೆ ಕಡ್ಡಾಯವಲ್ಲ, ಲಸಿಕೆ ಪಡೆಯಲು ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವಾಗ, ತಳಮಟ್ಟದ ಅಧಿಕಾರಿಗಳು, ಇದನ್ನು ಮೀರಿ ಜನರು ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಇಲ್ಲವಾದಲ್ಲಿ ಶಿಕ್ಷಾರ್ಹವಾಗುತ್ತದೆ ಎನ್ನುವುದು ಕಾನೂನು ಬಾಹಿರವಾಗಿದೆ. ಇದು ಅವೈಜ್ಞಾನಿಕ ವಾದವಾಗಿದೆ. ಲಸಿಕೆಯ ಪ್ರಯೋಜನಗಳ ಬಗ್ಗೆ ಜನಜಾಗೃತಿ ಮೂಡಿಸುವುದಷ್ಟೇ ಸರ್ಕಾರದ ಪ್ರಯತ್ನವಾಗಿರಬೇಕೇ ಹೊರತು ಜನರನ್ನು ಬೆದರಿಸುವುದು ಆಗಬಾರದು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.