ಮಂಗಳೂರು, ಅ.26: ನಗರ ಹೊರವಲಯದ ಕೂಳೂರಿನ ನಾಗನಕಟ್ಟೆಯಿಂದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ 6 ನಾಗನ ಕಲ್ಲುಗಳು ಮಂಗಳವಾರ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿವೆ.
ನಾಗನಕಟ್ಟೆಯಲ್ಲಿ 19 ನಾಗನ ಕಲ್ಲುಗಳಿದ್ದವು. ಆ ಪೈಕಿ 6 ನಾಗನಕಲ್ಲುಗಳು ಕಳೆದ ಶನಿವಾರ ನಾಪತ್ತೆಯಾಗಿದ್ದವು. ಒಂದು ಕಲ್ಲನ್ನು ಒಡೆದು ಹಾನಿಗೊಳಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಕಾವೂರು ಪೊಲೀಸರು ಮಂಗಳವಾರ ಬೆಳಗ್ಗೆ ನಾಗನ ಕಲ್ಲಿಗಾಗಿ ಹುಡುಕಾಟ ಆರಂಭಿಸಿದ್ದರು. ಅದರಂತೆ ನಾಗನಕಟ್ಟೆ ಸಮೀಪದ ಬಾವಿಯ ನೀರನ್ನು ಖಾಲಿ ಮಾಡಿ ಹುಡುಕಲಾಯಿತು. ಆದರೆ ಕಲ್ಲು ಪತ್ತೆಯಾಗಿರಲಿಲ್ಲ. ಬಳಿಕ ಸಮೀಪದಲ್ಲೇ ಇರುವ ನೀರು ತುಂಬಿದ ಸ್ಥಳದಲ್ಲಿ ಕಲ್ಲುಗಳು ಪತ್ತೆಯಾಗಿವೆ. ಆದರೆ ನಾಗನಕಟ್ಟೆಗೆ ಹಾನಿ ಮಾಡಿ ಕಲ್ಲುಗಳನ್ನು ಎಸೆದಿರುವ ಆರೋಪಿಗಳ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.