ಉಳ್ಳಾಲ: ಕುಂಪಲ ಸರಳಾಯ ಕಾಲನಿ ನಿವಾಸಿ ಸುಬ್ರಹ್ಮಣ್ಯ ರಾವ್ ಸಿಂಧ್ಯ(45) ಮೃತ ದುರ್ದೈವಿ. ಇಂದು ಸಂಜೆ ಸುಬ್ರಹ್ಮಣ್ಯ ಅವರು ಮಂಗಳೂರಿನಿಂದ ಕುಂಪಲ ಕಡೆಗೆ ತೊಕ್ಕೊಟ್ಟು ಮೇಲ್ಸೇತುವೆ ಮೇಲಿಂದ ಬುಲೆಟಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಮೇಲ್ಸೇತುವೆಯಿಂದ 20 ಅಡಿ ಆಳದ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಸುಬ್ರಹ್ಮಣ್ಯ ಅವರು ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಅಸುನೀಗಿದ್ದಾರೆ.
ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬರುತ್ತಿದ್ದ ಬುಲೆಟ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್‌ಗೆ ಡಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.