ತಮಿಳುನಾಡು: ಖಾಸಗಿ ಶಾಲೆಗಳಿಗೆ ಸರ್ಕಾರಿ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ 100 ಕೋಟಿ ರೂಪಾಯಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ, ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು ಇಂದು ಬಂಧಿಸಲಾಗಿದೆ. ಮದ್ರಾಸ್ ಹೈಕೋರ್ಟ್ ಇಂದು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ.
ಸರ್ಕಾರಿ ಮಾನ್ಯತೆ ಮತ್ತು ಇತರ ಶಾಸನಬದ್ಧ ಅನುಮೋದನೆಗಳನ್ನು ಕೊಡಿಸುವುದಾಗಿ ನಂಬಿಸಿ, ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುವ ಮೂಲಕ ಬೃಹತ್ ವಂಚನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿತ್ತು.
1,000ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಸರ್ಕಾರಿ ಅನುಮೋದನೆ ಕೊಡಿಸುವುದಾಗಿ ಭರವಸೆ ನೀಡಿ, ಸುಮಾರು 100 ಕೋಟಿ ರೂ. ವಂಚಿಸಲಾಗಿದೆ ಎಂದು ಆರೋಪಿಸಿ, ಖಾಸಗಿ ಶಾಲೆಗಳ ಸಂಘದ ಪ್ರಧಾನ ಕಾರ್ಯದರ್ಶಿಯೊಬ್ಬರು ಚೆನ್ನೈನ ಕೇಂದ್ರ ಅಪರಾಧ ವಿಭಾಗಕ್ಕೆ (CCB) ದೂರು ನೀಡಿದ್ದರು. ಇದರ ಆಧಾರದ ಮೇಲೆ ಹಾಗೂ ಲಭ್ಯವಾದ ಸಾಕ್ಷಿ ಹಿನ್ನೆಲೆ ಸಿಸಿಬಿ ಅನ್ಬಿಲ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಡಿಎಂಕೆ ಪದಾಧಿಕಾರಿ ಹಾಗೂ ತಮಿಳುನಾಡು ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಪಿ.ಟಿ. ಅರಸಕುಮಾರ್ ಕೂಡ ಬಂಧಿತರಲ್ಲಿ ಒಬ್ಬರಾಗಿದ್ದಾರೆ.
ಪ್ರಕರಣ ಸಂಬಂಧ ಸೆ.16ರಂದು, ಚೆನ್ನೈ ಮತ್ತು ತಿರುಚಿಯಲ್ಲಿ ಅನ್ಬಿಲ್ ಹಾಗೂ ಅವರ ಸಹಾಯಕರುಗಳಾದ ವಲಾಡಿ ಕಾರ್ತಿಕ್, ಅರುಣ್ ಪ್ರಕಾಶ್ ಮತ್ತು ಪ್ರಕಾಶ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಪೊಲೀಸರು ಶೋಧ ನಡೆಸಿದ್ದರು. ಶೋಧದ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಅನ್ಬಿಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಮುತ್ತುಕುಮಾರ್ ಅವರೊಂದಿಗೆ ನಂಟು ಹೊಂದಿರಬಹುದು ಎಂದು ಶಂಕಿಸಲಾದ ಅವರ ಸಂಬಂಧಿಕರ ಮನೆ ಮತ್ತು ಅಂಗಡಿಗಳಲ್ಲೂ ಶೋಧ ನಡೆಸಲಾಗಿತ್ತು. ಅಲ್ಲದೇ, ಚೆನ್ನೈನ ಸಾಲಿಗ್ರಾಮಂ, ಕೋಡಂಬಾಕ್ಕಂ, ಚೂಲೈಮೇಡು, ಪೂನಮಲ್ಲಿ ಮತ್ತು ನಾವಲೂರು ಸೇರಿದಂತೆ ಐದು ಸ್ಥಳಗಳಲ್ಲಿ ಹೆಚ್ಚಿನ ಶೋಧ ನಡೆಸಿದ್ದರು. ಶೋಧದ ವೇಳೆ ಪ್ರಕರಣಕ್ಕೆ ಸಂಬಂಧಿಸಿದ 44 ದಾಖಲೆ ಮತ್ತು ಒಂದು ಲ್ಯಾಪ್ಟಾಪ್ ವಶಪಡಿಸಿಕೊಂಡ ಬಗ್ಗೆ ವರದಿಯಾಗಿತ್ತು.
ಈ ಆರೋಪವನ್ನು ನಿರಾಕರಿಸಿರಿಸುವ ಮೂಲಕ ಅನ್ಬಿಲ್ ಮಹೇಶ್ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಕ್ಷ್ಮಿ ನಾರಾಯಣನ್ ಅವರು, ಇಂದು ಅರ್ಜಿಯನ್ನು ವಜಾಗೊಳಿಸಿದರು. ಸೋಮವಾರ ನ್ಯಾಯಾಲಯದ ಆದೇಶದ ಮೇರೆಗೆ, ಪೊಲೀಸರು ಅಮಿಂಜಿಕರೈನಲ್ಲಿ ಅನ್ಬಿಲ್ ಅವರನ್ನು ವಶಕ್ಕೆ ತೆಗೆದುಕೊಂಡರು.
ಅಕ್ಟೋಬರ್ 16 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರು ಎರಡೂ ಕಡೆಯ ವಾದಗಳನ್ನು ಆಲಿಸಿ, ತೀರ್ಪನ್ನು ಕಾಯ್ದಿರಿಸಿದ್ದರು. ಪೊಲೀಸರ ಪರವಾಗಿ ಹಾಜರಾದ ಸರ್ಕಾರಿ ಅಭಿಯೋಜಕ ಜಾನ್ ಸತ್ಯನ್ ಅವರು, ಅನ್ಬಿಲ್ ಮಹೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅಗತ್ಯ ಎಂದು ಅವರು ವಾದಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post