ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಡಿಸೆಂಬರ್ 28ರಿಂದ (ಮಂಗಳವಾರ) 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಭೆ
ಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು. ನಂತರ ರಾತ್ರಿ ಕರ್ಫ್ಯೂ ಜಾರಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಮಂಗಳವಾರದಿಂದ ರಾತ್ರಿ 10ರ ಬಳಿಕ ಸಾರ್ವಜನಿಕ ಸಾರಿಗೆ ಸೇವೆ ಹೊರತುಪಡಿಸಿ ಇತರ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. 2022ರ ಜನವರಿ 7ರವರೆಗೂ ಈ ನಿರ್ಬಂಧ ಜಾರಿಯಲ್ಲಿರಲಿದೆ. ರಾತ್ರಿ
ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು, ವಿವಿಧ ನಗರಗಳ ಪೊಲೀಸ್ ಕಮಿಷನರ್‌ಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.
ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್, ಕೋವಿಡ್ ಪ್ರಕರಣಗಳು, ಅದರಲ್ಲೂ ಓಮೈಕ್ರಾನ್ ತಳಿಯ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳ ಹೆಚ್ಚಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯ ಮಟ್ಟದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಅಭಿಪ್ರಾಯವನ್ನೂ ಪಡೆಯಲಾಯಿತು. ಆ ಬಳಿಕ ರಾತ್ರಿ ಕರ್ಫ್ಯೂ ಜಾರಿ ಮಾಡುವ ತೀರ್ಮಾನಕ್ಕೆ ಬರಲಾಯಿತು ಎಂದರು.
ಹತ್ತು ದಿನಗಳವರೆಗೂ ಇದೇ ಮಾರ್ಗಸೂಚಿ ಮುಂದುವರಿಯಲಿದೆ. ಸದ್ಯಕ್ಕೆ ಹೋಟೆಲ್, ರೆಸ್ಟೋರೆಂಟ್, ಕ್ಲಬ್ ಮತ್ತು ಪಬ್‌ಗಳಲ್ಲಿ ಮಾತ್ರ ಸಾಮರ್ಥ್ಯದ ಶೇ 50ರಷ್ಟು ಆಸನಗಳನ್ನು ಭರ್ತಿ ಮಾಡಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ಸದ್ಯಕ್ಕೆ ಈ ನಿರ್ಬಂಧ ಉಳಿದ ವಾಣಿಜ್ಯ ವಹಿವಾಟುಗಳಿಗೆ ಅನ್ವಯವಾಗುವುದಿಲ್ಲ. ಜ.7 ಕ್ಕೆ ಪರಿಸ್ಥಿತಿ ಅವಲೋಕಿಸಿದ ಬಳಿಕ ಆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಓಮೈಕ್ರಾನ್ ತಳಿಯ ಕೊರೊನಾ ವೈರಾಣು ಸೋಂಕು ವೇಗವಾಗಿ ಹರಡುತ್ತಿದೆ. ರಾಜ್ಯದಲ್ಲೇ 38 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು 400 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ನಿಯಂತ್ರಿಸಲು ಬಿಗಿಯಾದ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ ಎಂದರು.
ಪರಿಸ್ಥಿತಿ ನಿಯಂತ್ರಣಕ್ಕೆ ಸಜ್ಜು: ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಲಸಿಕೆ ನೀಡುವುದನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ ಎಂದು ಸಚಿವರು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post