ಕಾವೂರು :‘ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ವಿಫಲರಾಗಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಕಾವೂರು ಜಂಕ್ಷನ್‌ನಲ್ಲಿ ಉರುಂದಾಡಿ ಕ್ರೈಸ್ತರ ಪ್ರಾರ್ಥನಾಲಯ ಧ್ವಂಸ ವಿರೋಧಿಸಿ, ಡಿವೈಎಫ್ಐ ಕಾವೂರು ವಲಯ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಭಾನುವಾರ ಮಾತನಾಡಿದರು.
‘ಎಂಆರ್‌ಪಿಎಲ್ ಉದ್ಯೋಗದ ಪ್ರಶ್ನೆ, ಸುರತ್ಕಲ್ ಟೋಲ್‌ಗೇಟ್ ಅಕ್ರಮ, ಸುರತ್ಕಲ್ ಮಾರುಕಟ್ಟೆ ನಿರ್ಮಾಣ ಮುಂತಾದ ವಿಚಾರಗಳಲ್ಲಿ ಶಾಸಕ ಭರತ್ ಶೆಟ್ಟಿ ಆಸಕ್ತಿ ತೋರಿಸಲಿಲ್ಲ. ಬದಲಿಗೆ ಬೃಹತ್ ಕೈಗಾರಿಕೆ, ಟೋಲ್ ಮಾಫಿಯಾಗಳೊಂದಿಗೆ ಶಾಮೀಲಾಗಿ ಕ್ಷೇತ್ರದ ಜನರಿಗೆ ಅನ್ಯಾಯ ಎಸಗಿದರು. ಚುನಾವಣೆ ಹತ್ತಿರ ಬರುತ್ತಿರುವಾಗ ಮತ್ತೆ ಕೋಮು ವಿಭಜನೆಯ ರಾಜಕಾರಣದ ಮೊರೆ ಹೋಗುತ್ತಿದ್ದಾರೆ. ಉರುಂದಾಡಿ ಕ್ರೈಸ್ತರ ಪ್ರಾರ್ಥನಾಲಯ ಧ್ವಂಸದ ಹಿಂದೆ ಅವರ ಕೈವಾಡವಿದೆ’ ಎಂದರು.

ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ‘ಅಕ್ರಮ ವಾಣಿಜ್ಯ ಕಟ್ಟಡಗಳ ವಿರುದ್ಧ ಧ್ವನಿ ಎತ್ತದ ಶಾಸಕರು, ದಶಕಗಳಿಂದ ಇರುವ ಕ್ರೈಸ್ತರ ಆರಾಧನಾಲಯದ ವಿಚಾರದಲ್ಲಿ ಕಾನೂನು ಮಾತನಾಡಿದ್ದಾರೆ. ಇದು ಅವರ ಕೋಮು ಪಕ್ಷಪಾತಕ್ಕೆ ಸಾಕ್ಷಿ, ಕಾವೂರು ಪೊಲೀಸರು ನ್ಯಾಯ ಪಾಲಿಸುವ ಬದಲಿಗೆ ಬಿಜೆಪಿ ನಾಯಕರ ಮಾತಿಗೆ ಗೋಣು ಅಲ್ಲಾಡಿಸುತ್ತಿದ್ದಾರೆ’ ಎಂದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ನೇಬಲ್ ಬೆನ್ನಿಸ್, ಕನಕದಾಸ ಕೂಳೂರು, ಜಾನ್ ಕೂಳೂರು, ಅರುಣ್, ವಿನ್ಸೆಂಟ್ ಪಿರೇರಾ, ಪ್ರೇಮ್, ಸಿಪಿಎಂ ಮಖಂಡರಾದ ಅಹ್ಮದ್ ಬಶೀರ್, ಅನಿಲ್ ಡಿಸೋಜ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಪಂಜಿಮೊಗರು, ಸೌಮ್ಯಾ, ಲತಾ, ಕ್ಲವಿಟಾ, ಡಿವೈಎಫ್ಐ ಮುಖಂಡರಾದ ನೌಷಾದ್ ಬಾವ, ನವೀನ್ ಕೊಂಚಾಡಿ, ಶರೀಫ್ ಕುಲ, ಹನುಮಂತ್, ಖಲೀಲ್ ಪಂಜಿಮೊಗರು ಇದ್ದರು.