ಮಂಗಳೂರು: ಹಂಪನಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಕ್ಕೆ ಬೇಡಿಕೆ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಹಂಪನಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ದೇಶಿತ ₹ 4.80 ಕೋಟಿ ವೆಚ್ಚದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳು ಮಾತ್ರ ಇದ್ದು, ವಿಜ್ಞಾನ ವಿಭಾಗ ಪ್ರಾರಂಭಿಸಲು ಶಾಸಕರು ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರ ಎಂದಿಗೂ ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ ಎಂದರು.
ಸರ್ಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಒದಗಿಸಲು ಸಾಧ್ಯವಾಗದಿದ್ದರೂ, ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿಲ್ಲ. ಬಜೆಟ್‌ನಲ್ಲಿ ₹ 24 ಸಾವಿರ ಕೋಟಿ ಮೊತ್ತವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ. ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಣಕ್ಕೆ, ಕೋವಿಡ್‌ನಂತಹ ಅತ್ಯಂತ ಕಷ್ಟದ ದಿನಗಳಲ್ಲೂ ಅನುದಾನ ಕಡಿತಗೊಳಿಸಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವೇದವ್ಯಾಸ ಕಾಮತ್ ಮಾತನಾಡಿ, ಶಕ್ತಿನಗರ ಕಾಲೇಜಿಗೆ ಕೂಡ ಕಟ್ಟಡದ ಅಗತ್ಯವಿದ್ದು, ಶಿಕ್ಷಣ ಸಚಿವರ ಎದುರು ಬೇಡಿಕೆ ಇಡಲಾಗಿದೆ. ನಗರದ ಅನೇಕ ಕಾಲೇಜುಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.
ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿತಿನಿಕುಮಾರ್, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ ರೈ ಬೋಳಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ದಿವಾಕರ ಪಾಂಡೇಶ್ವರ, ಡಿಡಿಪಿಯು ಸಿ.ಡಿ.ಜಯಣ್ಣ, ಡಿಡಿಪಿಐ ಸುಧಾಕರ್ ಕೆ, ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ ಇದ್ದರು. ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಮಸ್ಕರೇನಸ್ ಸ್ವಾಗತಿಸಿದರು.