ಮಂಗಳೂರು, ಸೆ.28: ಸುರತ್ಕಲ್ ಹೆದ್ದಾರಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿರುವುದು ಬೆಳಕಿಗೆ ಬಂದಿದೆ. ಮಲ್ಪೆ ಬೀಚ್ ಗೆ ತೆರಳಿ, ವಾಪಸಾಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪು ಮುಗಿಬಿದ್ದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾಗಿದೆ.
ಬೊಲೆರೋ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಯುವಕ- ಯುವತಿಯರು ಮಲ್ಪೆ ಬೀಚ್ ಗೆ ತೆರಳಿ ಮಂಗಳೂರಿನತ್ತ ಬರುತ್ತಿದ್ದರು. ಈ ವೇಳೆ, ಹಿಂದು ಸಂಘಟನೆಗೆ ಸೇರಿದ ಯುವಕರ ಗುಂಪು ಅಡ್ಡಗಟ್ಟಿದ್ದು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಲು ಮುಂದಾಗಿದೆ. ಈ ವೇಳೆ, ಸಿವಿಲ್ ಡ್ರೆಸ್ ನಲ್ಲಿದ್ದ ಮಂಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಯುವಕರನ್ನು ತಡೆದಿದ್ದು ಹೊಡೆಯಬೇಡಿ ಎನ್ನುತ್ತಾ ಯುವಕರನ್ನು ಅಂಗಲಾಚಿದ್ದಾರೆ.
ಆದರೆ, ಯುವಕರು ಪೊಲೀಸ್ ಅಧಿಕಾರಿಯ ಮಾತು ಕೇಳದೆ ಬೊಲೆರೋ ವಾಹನಕ್ಕೆ ಕೈ ತುರುಕಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಇದರ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು ವಿಡಿಯೋ ವೈರಲ್ ಬೆನ್ನಲ್ಲೇ ಐವರು ಯುವಕರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
Discussion about this post