ಮಂಗಳೂರು, ಸೆ.27: ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿದ್ದು ತುರ್ತು ಕರೆಗೆ ಸ್ಪಂದಿಸಿದ ಕೋಸ್ಟ್ ಗಾರ್ಡ್ ಸಿಬಂದಿ ಆಳ ಸಮುದ್ರದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ವಸಂತ ಎನ್ನುವ ಮೀನುಗಾರ ಬೇಬಿ ಮೇರಿ–4 ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಕಡಲಿಗೆ ತೆರಳಿದ್ದರು. ಪಣಂಬೂರು ಕಡಲ ತೀರದಿಂದ ಸುಮಾರು 36 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಉಸಿರಾಟದ ಸಮಸ್ಯೆ ಆಗಿತ್ತು. ಈ ವೇಳೆ ಇನ್ನೊಂದು ಮೀನುಗಾರಿಕಾ ಬೋಟ್ ಕಾರ್ಮಿಕರು ಕೋಸ್ಟ್ ಗಾರ್ಡ್ ಪಡೆಯನ್ನು ಸಂಪರ್ಕಿಸಿ ತುರ್ತು ನೆರವು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಕರಾವಳಿ ರಕ್ಷಣ ಪಡೆಯು ಸಾಗರ ರಕ್ಷಣ ಉಪಕೇಂದ್ರವನ್ನು (ಎಂಆರ್‌ಎಸ್‌ಸಿ) ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶವನ್ನು ಕಳುಹಿಸಿದೆ.
ಈ ವೇಳೆ ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣ ಪಡೆಯ ಇಂಟರ್‌ಸೆಪ್ಟರ್ ದೋಣಿ ಸಿ 446, ವಸಂತ ಇದ್ದ ದೋಣಿ ಹತ್ತಿರ ಹೋಗಿ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿತು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತರಲಾಯಿತು. ಬಂದರಿನ ಜೆಟ್ಟಿಯಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸಿ, ಬೆಂದೂರುವೆಲ್‌ನ ಎಸ್‌ಸಿಎಸ್ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸುವುದಕ್ಕೆ ವ್ಯವಸ್ಥೆ ಕಲ್ಪಿಸಿತು.
Discover more from Coastal Times Kannada
Subscribe to get the latest posts sent to your email.
Discussion about this post