ಲೌಕಿಕ ಜೀವನವನ್ನು ಪರಮಾರ್ಥಿಕತೆಯೊಂದಿಗೆ ಜೋಡಿಸಿ ಮನುಷ್ಯನನ್ನು ಆಂತರಿಕವಾಗಿ ಸಂಸ್ಕರಿಸಲು ಬಂದ ಪ್ರವಾದಿಗಳಲ್ಲಿ ಕೊನೆಯವರು ಮುಹಮ್ಮದ್ ಪೈಗಂಬರರು. ಮುಹಮ್ಮದರು ಕುಲೀನ ಮನೆತನದಲ್ಲಿ ಹುಟ್ಟಿದರು. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರೂ ಯಾವುದೇ ರೀತಿಯ ಸಂಕಷ್ಟವಿಲ್ಲದೆ ಅಜ್ಜ, ತಂದೆಯ ಸಹೋದರರ ಕಣ್ಮಣಿಯಾಗಿ ಬೆಳೆದರು. ಸದಾ ಸತ್ಯ ಹೇಳುವ ಕಾರಣ ಸಮಾಜದಲ್ಲಿ ಅಮೀನ್ ,ಸಾಧಿಕ್ (ಸತ್ಯಸಂಧ, ಪ್ರಾಮಾಣಿಕ) ಎಂಬ ಬಿರುದು ಇತ್ತು. ಶುದ್ಧವಾದ ಹೃದಯ ಶುದ್ಧವಾದುದನ್ನು ಬಯಸುತ್ತದೆ. ಶುದ್ಧವಾದುದನ್ನು ಹುಡುಕುತ್ತದೆ. ಮುಹಮ್ಮದರು ಸಮಾಜದ ಕೆಡುಕುಗಳ ಬಗ್ಗೆ ಸದಾ ಚಿಂತಿತರಾಗಿರುತ್ತಿದ್ದರು. ಹಿರಾ ಗುಹೆಯಲ್ಲಿ ಏಕಾಂತ ವಾಸ ಅನುಭವಿಸುತ್ತಿದ್ದರು. ನಲ್ವತ್ತು ವರ್ಷ ಪ್ರಾಯದವರೆಗೂ ದೇವನ ಬಗ್ಗೆ, ಪರಲೋಕದ ಬಗ್ಗೆ ಪ್ರವಚನ ನೀಡಿದವರಲ್ಲ. ನಲ್ವತ್ತು ವರ್ಷ ಪ್ರಾಯದಲ್ಲಿ ಹಿರಾಗುಹೆಯಲ್ಲಿ ದೇವವಾಣಿ ಅವತಿರ್ಣವಾಗುತ್ತದೆ. ಅದರ ನಂತರ ಅವರು ಬೋಧಕರಾಗಿ ಮಾರ್ಪಡುತ್ತಾರೆ.
“ಒಳಿತು ಮತ್ತು ಕೆಡುಕು ಸರಿ ಸಮಾನವಲ್ಲ. ನೀವು ಅತ್ಯುತ್ತಮ ಒಳಿತಿನ ಮೂಲಕ ಕೆಡುಕನ್ನು ದೂರೀಕರಿಸಿರಿ. ನಿಮ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತ ಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ”ಎಂಬ ದೇವ ನಿರ್ದೇಶನದಂತೆ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಮುಹಮ್ಮದರು ದೇವಭಯವನ್ನು ಅತ್ಯುತ್ತಮ ಒಳಿತೆಂದು ಪ್ರತಿಪಾದಿಸಿದರು. ಜೀವನದಲ್ಲಿ ಯಾರಿಗೂ ಅನ್ಯಾಯವಾಗದೇ, ಯಾರ ಹಕ್ಕು ಚ್ಯುತಿಯಾಗದೇ, ಯಾರೊಂದಿಗೂ ಅವ್ಯವಹಾರ ಮಾಡದೇ ದೇವನು ನೋಡುತ್ತಿದ್ದಾನೆ ಎಂಬ ಪ್ರಜ್ಞೆಯಿಂದ ಜಾಗ್ರತೆಯಿಂದ ಬದುಕುವುದೇ ದೇವ ಭಯವಾಗಿದೆ ಎಂಬುದನ್ನು ಕಲಿಸಿಕೊಟ್ಟರು. ಸತ್ಯ ಹೇಳುವುದು ಎಲ್ಲ ಕೆಡುಕುಗಳನ್ನು ಅಳಿಸಿ ಹಾಕುವ ಪ್ರಭಾವಪೂರ್ಣ ಒಳಿತು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
ಓರ್ವ ವ್ಯಕ್ತಿ ನಾನು ಎಲ್ಲ ರೀತಿಯ ಕೆಡುಕುಗಳಿಂದ ಮುಕ್ತನಾಗಲು ಬಯಸುತ್ತೇನೆ ಎಂದಾಗ ನೀನು ಸದಾ ಸತ್ಯವನ್ನೇ ಹೇಳುತ್ತೇನೆ ಎಂದು ನನ್ನಲ್ಲಿ ಪ್ರತಿಜ್ಞೆ ಮಾಡು ಎಂದರು. ಆ ವ್ಯಕ್ತಿ ಪ್ರತಿಜ್ಞೆ ಮಾಡುತ್ತಾನೆ. ರಾತ್ರಿಯಾಗುವಾ ಅವನಿಗೆ ಶರಾಬು ಕುಡಿಯಲು ಮನಸ್ಸಾಗುತ್ತದೆ. ನಿನ್ನೆ ನೀನು ಶರಾಬು ಕುಡಿದಿರುವೆಯಾ ಎಂದು ಪ್ರವಾದಿಯವರು ಕೇಳಿದರೆ ಸುಳ್ಳು ಹೇಳಬೇಕಾದೀತು ಎಂದು ಭಾವಿಸಿ ಆತ ಅದರಿಂದ ದೂರನಿಲ್ಲುತ್ತಾನೆ. ಎಂದಿನಂತೆ ಕಳ್ಳತನ ಮಾಡಲು ಹೊರಡುತ್ತಾನೆ. ಆಗಲೂ ಪ್ರವಾದಿಯವರೊಂದಿಗೆ ಮಾಡಿದ ಪ್ರತಿಜ್ಞೆ ನೆನಪಾಗುತ್ತದೆ. ದಾರಿಯಲ್ಲಿ ಯಾರಾದರೂ ನೀನು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಿದರೆ ನಾನು ಸುಳ್ಳು ಹೇಳಬೇಕಾದೀತು ಎಂದು ಭಾವಿಸಿ ಕಳ್ಳತನವನ್ನು ಬಿಟ್ಟುಬಿಡುತ್ತಾನೆ. ವ್ಯಭಿಚಾರ ಮಾಡಲು ಮನಸ್ಸಾಗುತ್ತದೆ. ಪ್ರವಾದಿಯವರು ಕೇಳಿದರೆ ಸುಳ್ಳು ಹೇಳಬೇಕಾದೀತು ಎಂದು ಭಾವಿಸಿ ಅದನ್ನೂ ಬಿಟ್ಟುಬಿಡುತ್ತಾನೆ. ಹೀಗೆ ಎಲ್ಲ ಕೆಡುಕುಗಳಿಂದಲೂ ಮುಕ್ತನಾಗುತ್ತಾನೆ. ಇದಾಗಿತ್ತು ಪ್ರವಾದಿ ಮುಹಮ್ಮದ್ ಪೈಗಂಬರರ ಸುಧಾರಣೆಯ ವಿಧಾನ.
ನಾಚಿಕೆ ಎಂಬುದು ಅತ್ಯುತ್ತಮ ಒಳಿತು ಎಂಬುದನ್ನು ಮನಮುಟ್ಟುವ ಶೈಲಿಯಲ್ಲಿ ವ್ಯಾಖ್ಯಾನಿಸಿದರು. ತಲೆಯಲ್ಲಿ ಬರುವ ಕೆಟ್ಟ ವಿಚಾರಗಳಿಂದ ದೂರವಿರಬೇಕು. ಅಕ್ರಮ ಸಂಪಾದನೆಯ ಆಹಾರ ಹೊಟ್ಟೆಗೆ ಹೋಗಬಾರದು. ಲಂಚ,ಭ್ರಷ್ಟಾಚಾರ, ಕಾಳಸಂತೆ,ಅಕ್ರಮ ದಾಸ್ತಾನು,ಅಶ್ಲೀಲತೆ ಅಶ್ಲೀಲತೆಯ ಪ್ರಚಾರದಿಂದ ದೂರ ಇರಬೇಕು ಎಂದು ಹೇಳಿದರು. ದೇವನ ಮುಂದೆ ನಮ್ಮ ಎಲ್ಲ ಕರ್ಮಗಳು ಪ್ರಕಟವಾಗುವ ಚಿಂತೆಯಿಂದ ಸದಾ ಮರಣವನ್ನು ನೆನಪಿಸುತ್ತಿರಬೇಕೆಂದು ಹೇಳಿದರು. ಜನ ಹೇಗೆ ಆಂತರಿಕವಾಗಿ ಬದಲಾದರೆಂದರೆ ವ್ಯಭಿಚಾರ ಮಾಡಿದ ವ್ಯಕ್ತಿ ಒಬ್ಬರು ಬಂದು ನಾನು ವ್ಯಭಿಚಾರಿ,ನನಗೆ ಶಿಕ್ಷೆ ಕೊಡಬೇಕು ಎಂದರು. ನಾಲ್ಕು ಜನರ ಮುಂದೆ ಅವಮಾನ ಸಹಿಸುವೆನು. ಆದರೆ ಪರಲೋಕದಲ್ಲಿ ದೇವನ ಮುಂದೆ ಶಾಶ್ವತ ಅವಮಾನಕ್ಕೆ ಒಳಗಾಗಲಾರೆ ಎಂಬುದು ಆ ವ್ಯಕ್ತಿಯ ಉದ್ದೇಶವಾಗಿತ್ತು. ಹಾಗೆಯೇ ಓರ್ವ ವ್ಯಕ್ತಿ ಬಂದು ನನಗೆ ವ್ಯಭಿಚಾರ ಮಾಡಲು ಅನುಮತಿ ನೀಡಬೇಕು ಎಂದು ಹೇಳಿದಾಗ ನೀನು ವ್ಯಬಿಚಾರ ಮಾಡುವ ಹೆಣ್ಣು ಯಾರದೇ ತಾಯಿ, ತಂಗಿ, ಪತ್ನಿ ಆಗಿರಬಾರದು ಎಂದರು. ಆ ವ್ಯಕ್ತಿ ನಾಚಿಕೆಯಿಂದ ಹೊರಟುಹೋಗುತ್ತಾರೆ. ವ್ಯಭಿಚಾರ ಮಾಡುವುದನ್ನು ಬಿಟ್ಟುಬಿಡುತ್ತಾರೆ.
ಜೀವನ ಶಾಶ್ವತವಲ್ಲ. ಮರಣದ ಬಳಿಕ ಬರುವ ಜೀವನವೇ ಶಾಶ್ವತ. ಜನಸೇವೆ ಮಾಡುವ ಮೂಲಕ ದೇವನ ಪ್ರೀತಿ,ಗೌರವಾರ್ಹ ಸ್ಥಾನ ಗಳಿಸಲು ಸಾಧ್ಯವಿದೆ ಎಂದರು. ನಿಜವಾದ ದೇವ ಭಕ್ತ ಉತ್ತಮ ಜಾತಿಯ ಮರದ ಹಾಗೆ ಎಂಬ ದೇವ ಮಾರ್ಗದರ್ಶನದಂತೆ ಜನರಿಗೆ ಸದಾ ಉಪಕಾರಿಯಾಗಬೇಕೆಂದು ಹೇಳಿದರು. ಒಂದು ಮರದ ಗೆಲ್ಲು ದಾರಿಗೆ ಅಡ್ಡವಾಗಿದ್ದರೆ ಅದನ್ನು ತೆಗೆದು ಹಾಕುವುದು ಪುಣ್ಯಕರ್ಮ ವೆಂದು ಹೇಳಿದರು. ಕಾರಣ ಅದರಿಂದ ಜನರಿಗೆ ತೊಂದರೆಯಾಗುತ್ತದೆ. ಜನರಿಗೆ ತೊಂದರೆ ಕೊಡದವನೇ ಮುಸಲ್ಮಾನ ಎಂದರು.
ಅಸಹನೆ,ದ್ವೇಷ ಎಂಬುದು ಯುದ್ಧಗಳಿಗೂ ಕಾರಣವಾಗುತ್ತದೆ. ಪ್ರವಾದಿಯವರನ್ನು ಅತಿಯಾಗಿ ದ್ವೇಷಿಸುತ್ತಿದ್ದ ಒಂದು ಗೋತ್ರದ ಸರದಾರ ತನ್ನ ಆರ್ಥಿಕ ಸಂಕಷ್ಟ ತೋಡಿಕೊಂಡಾಗ ಮುನ್ನೂರು ಆಡುಗಳನ್ನು ಆತನಿಗೆ ಉಡುಗೊರೆಯಾಗಿ ನೀಡಿದರು. ಆ ವ್ಯಕ್ತಿ ಸಂತೋಷದಿಂದ ತನ್ನ ಗೋತ್ರದ ಕಡೆಗೆ ಹೋಗಿ ನಾನು ಮುಹಮ್ಮದರನ್ನು ಅತಿಹೆಚ್ಚು ದ್ವೇಷಿಸುತ್ತಿದ್ದೆ. ಆದರೆ ಈಗ ಮುಹಮ್ಮದ್ ನನಗೆ ಎಲ್ಲರಿಗಿಂತ ಹೆಚ್ಚು ಪ್ರಿಯವಾಗಿದ್ದಾರೆ ಎಂದನು. ಪ್ರೀತಿ,ಅನುಕಂಪ ಎಂಬ ಅತ್ಯುತ್ತಮ ಒಳಿತಿನ ಮೂಲಕ ದ್ವೇಷವನ್ನು ಜಯಿಸಿ ತೋರಿಸಿದವರೇ ಪೈಗಂಬರ್ ಮುಹಮ್ಮದರು.(ಶಾಂತಿ ಇರಲಿ)
ಅರಬರು ಯುದ್ಧ ಪ್ರಿಯರಾಗಿದ್ದರು. ಅರಬ್ ಇತಿಹಾಸ ಕಂಡ ಭೀಕರ ಯುದ್ಧ ಫುಜ್ಜಾರ್ ಯುದ್ಧ. ಅದರ ನಾಶ ನಷ್ಟದ ಬಗ್ಗೆ ಯೋಚಿಸುವಾಗಲೇ ಆ ಕಾಲದ ಜನ ನಡುಗುತ್ತಿದ್ದರು. ಯುವಕರಾಗಿದ್ದಾಗಲೇ ಪ್ರವಾದಿಯವರು ಶಾಂತಿ ಒಪ್ಪಂದಗಳಲ್ಲಿ ಭಾಗವಹಿಸುತ್ತಿದ್ದರು. ಜೀವನದುದ್ದಕ್ಕೂ ಶಾಂತಿ ಒಪ್ಪಂದಗಳ ಮೂಲಕ ಯುದ್ಧಪ್ರಿಯ ಅರಬರ ಸಮಾಜವನ್ನು ಶಾಂತಿಯ ಸಮಾಜವನ್ನಾಗಿ ಮಾರ್ಪಡಿಸಲು ಮುಹಮ್ಮದರು ಯಶಸ್ವಿಯಾದರು. (ಶಾಂತಿ ಇರಲಿ)
“ಒಳಿತಿನ ಕೆಲಸಗಳಲ್ಲಿ ಪರಸ್ಪರ ಸಹಕರಿಸಿರಿ.ಕೆಡುಕು ಮತ್ತು ಸಂಹಾರದ ಕೆಲಸಗಳಲ್ಲಿ ಸಹಕರಿಸಬೇಡಿರಿ.
(ಕುರ್ ಆನ್)
ಶಮೀರ ಜಹಾನ್, ಮಂಗಳೂರು.
Discover more from Coastal Times Kannada
Subscribe to get the latest posts sent to your email.
Discussion about this post