ಮಂಗಳೂರು, ನ.27: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಸಹಜ ಸಾವು ಪ್ರಕರಣಗಳಿಗೆ (ಅಪರಾಧ ಸಂಖ್ಯೆ 39/2025) ಸಂಬಂಧಿಸಿದಂತೆ ಪ್ರಣಬ್ ಮೊಹಂತಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂಲಕವೇ ಮುಂದಿನ ತನಿಖೆ ನಡೆಸಲು ರಾಜ್ಯ ಸರಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ನ.30ರಿಂದ ಡಿ.2ರವರೆಗೆ ನಗರದ ಕ್ಲಾಕ್ ಟವರ್ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ. ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ವರದಿಯಾದ ಪ್ರಕರಣಗಳ ಹಿಂದಿರುವ ನೈಜ ವಿಚಾರವನ್ನು ಹೊರತರುವುದು ಮತ್ತು ನ್ಯಾಯದ ನಿರೀಕ್ಷೆಯಲ್ಲಿರುವ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರಲ್ಲದೆ, ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಡಿ.3ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
1998ರಿಂದ 2014ರವರೆಗಿನ ಅವಧಿಯ ಅಧಿಕೃತ ಅಸಹಜ ಮರಣ ಪ್ರಕರಣಗಳ (ಯುಡಿಆರ್) ದಾಖಲೆಗಳಲ್ಲಿ 1,480 ಪ್ರಕರಣಗಳಲ್ಲದೆ ಇತರ ಮೂಲಗಳ ಮಾಹಿತಿ/ದಾಖಲೆಗಳ ಪ್ರಕಾರ 1,510 ಪ್ರಕರಣಗಳು ಕಂಡು ಬಂದಿದೆ. ಈ ಅಂಕಿ ಅಂಶಗಳಲ್ಲಿ ಕಂಡುಬರುವ 30 ಪ್ರಕರಣಗಳ ವ್ಯತ್ಯಾಸ ಸಹಿತ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸುವುದು ಅಗತ್ಯವಿದೆ ಎಂದು ಜಯಂತ್ ಹೇಳಿದರು.
ದೂರಿನಲ್ಲಿ ಉಲ್ಲೇಖಿಸಲಾದ 73 ಯುಡಿಆರ್ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು. ಯುಡಿಆರ್, ಮರಣೋತ್ತರ ಪರೀಕ್ಷೆ, ಪೊಲೀಸ್, ಆಸ್ಪತ್ರೆ ಮತ್ತು ಗ್ರಾಪಂ ದಾಖಲೆಗಳನ್ನು ಸಂರಕ್ಷಿಸಿ ಸಮಗ್ರ ಪರಿಶೀಲನೆ ನಡೆಸಬೇಕು. ಪದ್ಮಲತಾ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾನೂನುಬದ್ಧವಾಗಿ ಮರು ಪರಿಶೀಲಿಸಬೇಕು. ತನಿಖಾ ಸಂಸ್ಥೆಯೊಂದರ ಮೂಲಕ ಸ್ವತಂತ್ರ ತನಿಖೆ ನಡೆಸಬೇಕು ಎಂದು ಜಯಂತ್ ಆಗ್ರಹಿಸಿದರು.
ಆದರೆ ರಾಜ್ಯ ಸರ್ಕಾರ ತನಿಖೆಗೆ ಅನುಮತಿ ನೀಡಿಲ್ಲ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗ ನಾಲ್ಕು ಬಾರಿ ಪತ್ರ ಬರೆದಿದ್ದು ತನಿಖೆಗೆ ಒತ್ತಾಯಿಸಿದೆ. ಎಂಟು ತಿಂಗಳಿನಿಂದ ಎಸ್ಐಟಿ ನೀಡಿರುವ ವರದಿಯನ್ನು ಮುಚ್ಚಿಟ್ಟಿದ್ದು ಯಾಕೆ ಎನ್ನುವ ಬಗ್ಗೆ ಬಹಿರಂಗಪಡಿಸಬೇಕು. ನಮ್ಮ ಪ್ರತಿಭಟನೆ ಯಾವುದೇ ವ್ಯಕ್ತಿಯ ಅಥವಾ ಸಂಸ್ಥೆಯ ವಿರುದ್ಧ ಅಲ್ಲ. ಹೆಣ್ಮಕ್ಕಳ ಸಾವಿಗಾಗಿ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇವೆ ಎಂದು ಜಯಂತ್ ಹೇಳಿದರು. 2016ರಲ್ಲಿ ಮಕ್ಕಳ ದೌರ್ಜನ್ಯ ವಿರೋಧಿ ಸಮಿತಿಯ ಉಗ್ರಪ್ಪ, ಧರ್ಮಸ್ಥಳ ವ್ಯಾಪ್ತಿಯಲ್ಲಿ ವರ್ಷಕ್ಕೆ 300 ಅಪ್ರಾಪ್ತ ಹೆಣ್ಮಕ್ಕಳ ಮೇಲೆ ದೌರ್ಜನ್ಯಗಳಾಗುತ್ತಿದ್ದು, ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ಬಗ್ಗೆಯೂ ನಾವು ಮಾಹಿತಿ ಸಂಗ್ರಹಿಸಿದ್ದು, ಸರ್ಕಾರ ಮೌನ ವಹಿಸಿದ್ದೇಕೆ ಎಂದು ಸುದ್ದಿಗೋಷ್ಟಿಯಲ್ಲಿದ್ದ ದಿನೇಶ್ ಗಾಣಿಗ ಹೇಳಿದರು.
ಈಗ ಸಾಂಕೇತಿಕವಾಗಿ ಮೂರು ದಿನಗಳ ಧರಣಿ ನಡೆಸಲಿದ್ದು, ಸರ್ಕಾರ ಮಣಿಯದಿದ್ದರೆ ಇಡೀ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಆರಂಭವಾಗಲಿದೆ. ಎಸ್ಐಟಿಗೆ ಹೆಚ್ಚಿನ ತನಿಖೆಗಾಗಿ ಅಧಿಕಾರ ನೀಡಬೇಕು ಎನ್ನುವುದೇ ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ತನುಷ್ ಶೆಟ್ಟಿ, ಚರಣ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.




Discussion about this post