ಮಂಗಳೂರು, ನ.28:ತುಳುನಾಡಿನ ಶ್ರೇಷ್ಟ ಪುತ್ರ, ಕೆನರಾ ಶಾಲೆಯ ಹಳೆ ವಿದ್ಯಾರ್ಥಿ, ಪ್ರಖಂಡ ಜ್ಞಾನಿ, ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿ, ಅದ್ಭುತ ಮೇಧಾಶಕ್ತಿಯ ಸರ್ ಬೆನಗಲ್ ನರಸಿಂಗ್ ರಾವ್ ಅವರ ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗವಹಿಸಿರುವುದು ಅತೀವ ಸಂತಸ ತಂದಿದೆ ಎಂದು ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಹೇಳಿದ್ದಾರೆ.


ಅವರು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ವಿ.ರಮಣ್ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಶನಿವಾರ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದವರು. ನರಸಿಂಗ್ ರಾವ್ ಅವರು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿಯಲ್ಲಿಯೇ ಎಷ್ಟು ಪಾಂಡಿತ್ಯ ಹೊಂದಿದ್ದರು ಎಂದರೆ ಕೆಂಬ್ರಿಜ್ಜ್ ನಲ್ಲಿ ಅವರ ಸಹಪಾಠಿಯಾಗಿದ್ದ ಜವಾಹರ್ ಲಾಲ್ ನೆಹರೂ ಅವರು ತಮ್ಮ ತಂದೆಗೆ ಬರೆದಿದ್ದ ಪತ್ರದಲ್ಲಿ ರಾವ್ ಅವರ ಜ್ಞಾನ ಮತ್ತು ವಿದ್ವತ್ ಅನ್ನು ಪ್ರಶಂಸಿಸಿದ್ದರು. ರಾವ್ ಭಾರತದಲ್ಲಿ ಉನ್ನತ ಸ್ತರದಲ್ಲಿ ಸೇವೆ ಸಲ್ಲಿಸಲು ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ ಎಂದು ನೆಹರೂ ಅವರ ಅಭಿಪ್ರಾಯ ಭವಿಷ್ಯದಲ್ಲಿ ನಿಜವಾಯಿತು ಎಂದು ಅಬ್ದುಲ್ ನಜೀರ್ ಅವರು ಹೇಳಿದರು. ಭಾರತದ ಸಂವಿಧಾನದ ಪಾವಿತ್ರ್ಯತೆಯ ಬಗ್ಗೆ ವಿಶ್ವವೇ ಅಭಿಮಾನ ಪಟ್ಟಿರುವಾಗ, ಅದರ ರೂಪುರೇಶೆಯನ್ನು ರಚಿಸಿದ ರಾವ್ ನಿಜಕ್ಕೂ ಶ್ರೇಷ್ಟರು. ರಾವ್ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕೆನರಾ ಶಾಲೆಯಲ್ಲಿ ಮಾಡಿರುವುದು ಈ ಭಾಗದವರಾದ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ರಾವ್ ಎಷ್ಟು ದೊಡ್ಡ ವಿದ್ವಾಂಸರು ಎನ್ನುವುದಕ್ಕೆ ದೃಷ್ಣಾಂತಗಳಿವೆ ಎಂದು ಉದಾಹರಣೆಯೊಂದಿಗೆ ವಿವರಿಸಿದ ರಾಜ್ಯಪಾಲರು, ಅಮೇರಿಕದ ಸರ್ವೋಚ್ಚ ನ್ಯಾಯಾಲಯದ ಆಗಿನ ಜಸ್ಟೀಸ್ ಫೆಲಿಕ್ಸ್ ಫ್ರಾಂಕ್ ಫರ್ಟರ್ ಅವರು ರಾವ್ ಅವರ ಜ್ಞಾನದ ಬಗ್ಗೆ ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದಂತೆ ಅಮೇರಿಕಾದ ಅಧ್ಯಕ್ಷರು ತಮ್ಮ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಅಮೇರಿಕಾದ ಚರಿತ್ರೆ, ಕಾನೂನು ಬಗ್ಗೆ ಸಾಕಷ್ಟು ಅರಿವಿರುವ ಯಾರಾದರೂ ಸೂಕ್ತ ವ್ಯಕ್ತಿಯ ಬಗ್ಗೆ ತಮ್ಮಲ್ಲಿ ಕೇಳಿದರೆ ಬಿಎನ್ ರಾವ್ ತಮ್ಮ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ ಎನ್ನುತ್ತೇನೆ ಎಂದು ಹೇಳಿದ್ದರು ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಡಾ.ಬಿ.ಆರ್.ಅಂಬೇಡ್ಕರ್ 1949 ರಲ್ಲಿ ತಮ್ಮ ಭಾಷಣವೊಂದರಲ್ಲಿ ” ಸಂವಿಧಾನದ ರಚನೆಯ ಶ್ರೇಯಸ್ಸಿನಲ್ಲಿ ಬೆನಗಲ್ ನರಸಿಂಗ್ ರಾವ್ ಅವರ ಪಾಲು ದೊಡ್ಡದಿದೆ” ಎಂದು ಹೇಳಿದ್ದರು. ದೇಶದಲ್ಲಿ ಮೈಲಿಗಲ್ಲಾಗಿರುವ ಕಾಯಿದೆಗಳನ್ನು ಜಾರಿಗೆ ತರುವಲ್ಲಿ ರಾವ್ ಅವರ ವಿದ್ವತ್ತು ದೊಡ್ಡದಿದೆ ಎಂದು ಅಬ್ದುಲ್ ನಜೀರ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಸರ್. ಬಿಎನ್ ರಾವ್ ಅವರಂತಹ ಮೇಧಾವಿ ವಿದ್ಯಾರ್ಥಿಯನ್ನು ಸೃಷ್ಟಿಸಿದ ಶ್ರೇಯ ಕೆನರಾ ಶಾಲೆಗೆ ಸಲ್ಲುತ್ತದೆ. ಅವರ ಜೀವಿತಾವಧಿಯ ಅದೇ ಕಾಲಘಟ್ಟದಲ್ಲಿ ನಾವಿದ್ದರೆ ಎಷ್ಟು ಚೆನ್ನ ಎಂದು ಅನಿಸುತ್ತದೆ. ಖ್ಯಾತ ನ್ಯಾಯಾಂಗ ತಜ್ಞ ಫಾಲಿ ನಾರಿಮನ್ ಅವರು ತಮ್ಮ ಸಾಹಿತ್ಯದ ಕೊನೆಯ ಪುಸ್ತಕದಲ್ಲಿ ಸಂವಿಧಾನದ ರಚನೆಯಲ್ಲಿ ನರಸಿಂಗ ರಾವ್ ಅವರ ಕೊಡುಗೆಯನ್ನು ಬಣ್ಣಿಸಿದ್ದಾರೆ. ಬಂಗಾಳ ಹೈಕೋರ್ಟ್ ನ್ಯಾಯಾಧೀಶರಾಗಿ, ಜಮ್ಮು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ, ಮ್ಯಾನ್ಮಾರ್ ಸಂವಿಧಾನದ ರಚನೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದ, ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿ, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯರಾಗಿ ರಾವ್ ಸೇವೆ ಸಲ್ಲಿಸಿದ್ದಾರೆ. ಅಂತವರನ್ನು ಸ್ಮರಿಸುವ ಮೂಲಕ ಈ ಕಾರ್ಯಕ್ರಮ ಉತ್ತಮ ಮೇಲ್ಪಂಕ್ತಿ ಹಾಕಿದೆ ಎಂದು ಹೇಳಿದರು.

ಮರುಮುದ್ರಣದ ಪ್ರಥಮ ಪ್ರತಿಯನ್ನು ರಾವ್ ಅವರ ಸಹೋದರಿಯ ಮೊಮ್ಮೊಗ, ಹಿರಿಯ ಪತ್ರಕರ್ತ ಭರತ್ ಸಾವೂರ್ ಅವರಿಗೆ ರಾಜ್ಯಪಾಲರು ಹಸ್ತಾಂತರಿಸಿದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ್ ಕಾಮತ್, ಗೌರವ ಕಾರ್ಯದರ್ಶಿ ಯೋಗೀಶ್ ಕಾಮತ್, ನಿವೃತ್ತ ಐಎಎಸ್ ಅಧಿಕಾರಿ ನಿತಿನ್ ಆರ್ ಗೋಕರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಸ್ಮಿತಾ ಭಟ್ ನಿರೂಪಿಸಿದರು.
(ಬಾಕ್ಸಿನಲ್ಲಿ) ಸಭಾಂಗಣದಲ್ಲಿ ಸರ್ ಬೆನಗಲ್ ನರಸಿಂಗ ರಾವ್ ಅವರ ಬಾಲ್ಯದಿಂದ ಅವರ ಸಾಧನೆಯ ಪ್ರತಿ ಹೆಜ್ಜೆಯನ್ನು ದೃಶ್ಯಗಳೊಂದಿಗೆ ಬಹಳ ಆಕರ್ಷಕವಾಗಿ ಪ್ರದರ್ಶಿಸಲಾಗಿತ್ತು. ಭಾರತದ ಸಂವಿಧಾನದ ಮೊದಲ ಕರಡು ಪ್ರತಿ ಸಹಿತ ವಿವಿಧ ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅದನ್ನು ದೀಪ ಬೆಳಗಿಸುವ ಮೂಲಕ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹಾಗೂ ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾವ್ ಅವರ ಜೀವನದ ಕುರಿತು 12 ನಿಮಿಷಗಳ ಸಾಕ್ಷ್ಯಾಚಿತ್ರವನ್ನು ಪ್ರದರ್ಶಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ , ನಿವೃತ್ತ ಐಎಎಸ್ ಅಧಿಕಾರಿ ನಿತಿನ್ ಆರ್ ಗೋಕರ್ಣ ಅವರು ಪ್ರಜಾಪ್ರಭುತ್ವ – ಕಾನೂನು, ಅಧಿಕಾರ ಮತ್ತು ಉತ್ತರದಾಯಿತ್ವ ವಿಷಯದಲ್ಲಿ ಸಂವಾದ ನಡೆಸಿಕೊಟ್ಟರು. ನಿವೃತ್ತ ಪ್ರಾಧ್ಯಾಪಕ ಅನಂತಕೃಷ್ಣ ಭಟ್, ಹಿರಿಯ ಪತ್ರಕರ್ತ ಭರತ್ ಸಾವೂರು ಸರ್ ಬಿ.ಎನ್.ರಾವ್ – ಸಂವಿಧಾನ ಮತ್ತು ದೂರದೃಷ್ಟಿ ಸಂವಾದದಲ್ಲಿ ಭಾಗವಹಿಸಿದರು. ನ್ಯಾಯವಾದಿ ಸುಮಿತ್ ಭಟ್ ಸಂವಾದ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.




Discussion about this post