ನವದೆಹಲಿ: ಭಾರತದಲ್ಲಿ ಮುಂದಿನ ವರ್ಷವೇ 5ಜಿ ಸಂಪರ್ಕ ಸೇವೆ ಆರಂಭವಾಗಲಿದೆ. ಈ ಬಗ್ಗೆ ಈಗ ಕೇಂದ್ರ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ. ದೇಶದ ಎಲ್ಲ ಭಾಗದಲ್ಲೂ ಏಕಕಾಲಕ್ಕೆ 5ಜಿ ನೆಟ್‍ವರ್ಕ್ ಸೇವೆ ಸಿಗಲ್ಲ. ಆದರೆ ಆಯ್ದ ಮಹಾನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಗುರುಗ್ರಾಮ, ಬೆಂಗಳೂರು, ಕೊಲ್ಕತ್ತಾ, ಮುಂಬೈ, ದೆಹಲಿ, ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಮಹಾನಗರಗಳು ಮುಂದಿನ ವರ್ಷ 5ಜಿ ಸೇವೆಗಳನ್ನು ಪಡೆಯುವ ಮೊದಲ ಸ್ಥಳಗಳಾಗಿವೆ ಎಂದು ದೂರಸಂಪರ್ಕ ಇಲಾಖೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್-ಏಪ್ರಿಲ್ 2022ರಲ್ಲಿ 5ಜಿಗಾಗಿ ಸ್ಪೆಕ್ಟ್ರಮ್ ಹರಾಜುಗಳನ್ನು ನಡೆಸಲು ಸರ್ಕಾರ ಯೋಜನೆ ರೂಪಿಸಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೀಸಲು ಬೆಲೆ, ಬ್ಯಾಂಡ್ ಯೋಜನೆ, ಬ್ಲಾಕ್ ಗಾತ್ರ, ಸ್ಪೆಕ್ಟ್ರಮ್‌ನ ಪ್ರಮಾಣಕ್ಕೆ ಸಂಬಂಧಿಸಿದಂತೆ ಸ್ಪೆಕ್ಟ್ರಮ್ ಹರಾಜಿಗಾಗಿ ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್‍ನಿಂದ ಶಿಫಾರಸುಗಳನ್ನು ಕೋರಿತು. ಟ್ರಾಯ್ ಅದರ ಭಾಗವಾಗಿ, ಉದ್ಯಮದ ಮಧ್ಯಸ್ಥಗಾರರೊಂದಿಗೆ ಸಮಸ್ಯೆಯ ಕುರಿತು ಸಮಾಲೋಚನೆಗಳನ್ನು ಪ್ರಾರಂಭಿಸಿದೆ.
5ಜಿ ಸಂಪರ್ಕ ಸೇವೆಯಿಂದ ವೇಗದ ಇಂಟರ್ ನೆಟ್ ಸಂಪರ್ಕ ಸಾಧ್ಯವಾಗಲಿದೆ. ದೇಶದ ಆರೋಗ್ಯ, ದೂರಸಂಪರ್ಕ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ 5ಜಿ ಸಂಪರ್ಕ ಸೇವೆಯಿಂದ ಸಾಧ್ಯವಾಗುವ ನಿರೀಕ್ಷೆ ಇದೆ.