ಮಂಗಳೂರು: ಮಾರ್ನಮಿಕಟ್ಟೆಯಲ್ಲಿರುವ ಪ್ರಸಿದ್ಧ ಕೊರಗಜ್ಜ ದೈವದ ಗುಡಿಯ ಮುಂಭಾಗ ಯಾರೋ ಕಿಡಿಗೇಡಿಗಳು ಕಾಂಡೋಮ್ ಹಾಕಿ ವಿಕೃತಿ ಮೆರೆದಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸಿದರು.
ಮಂಗಳವಾರ ಬೆಳಗ್ಗೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಸ್ಥಳೀಯರು ಮತ್ತು ಭಕ್ತರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದ್ದಾರೆ. ದುಷ್ಕರ್ಮಿಗಳು ಉಯೋಗಿಸಿದ ಕಾಂಡೋಮ್ ಅನ್ನು ದೇಗುಲದತ್ತ ಎಸೆದಿದ್ದಾರೆ.
ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲು ಶಾಸಕ ವೇದವ್ಯಾಸ ಕಾಮತ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುವ ಯಾರೇ ಆದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ. ಶಾಂತಿಯುತವಾಗಿರುವ ಕರಾವಳಿಯನ್ನು ಇಂತಹ ಕೃತ್ಯಗಳ ಮೂಲಕ ಕೋಮುಗಲಭೆಗೆ ಪ್ರಚೋದಿಸುವ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಪ್ರಶಾಂತವಾಗಿರುವ ಕರಾವಳಿಯಲ್ಲಿ ಕೋಮುಗಲಭೆ ಎಬ್ಬಿಸಲು ಪ್ರಯತ್ನಿಸಿದರೆ ಅದನ್ನು ಕಂಡು ಸುಮ್ಮನೆ ಇರಲಾಗದು. 4 ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿಲ್ಲ. ಮುಂದೆಯೂ ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ.