ಉಡುಪಿ: ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಮುಸ್ಕಾನ್ ಹಾಗೂ ಶಫಾ ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಕಾಲೇಜಿನಿಂದ ದೂರ ಉಳಿದಿದ್ದ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗುವುದೋ, ಬಿಡುವುದೋ ಎಂಬ ದುಗುಡ ಕಾಡಿತ್ತು. ಆದರೆ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ವಿದ್ಯಾರ್ಥಿಗಳು ಹಿಜಾಬ್ ಕಾರಣಕ್ಕೆ ಶಿಕ್ಷಣ ವಂಚಿತರಾಗಬೇಡಿ, ಪರೀಕ್ಷೆ ಬರೆಯರಿ, ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ಮಾಡಿದ್ದರು. ಹೀಗಾಗಿ ರಾಜ್ಯದ ಎಲ್ಲ ಕಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡ ವೇಳೆ ಹೆಚ್ಚಿನ ಕಡೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದರು. ಕೆಲವು ಕಡೆ ಸೀಮಿತ ಸಂಖ್ಯೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. ಆದರೆ ಈ ಬಗ್ಗೆ
ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿಗಳು ಏನು ಮಾಡುತ್ತಾರೆ ಎನ್ನುವ ಕುತೂಹಲ ಇತ್ತು.
ಮಂಗಳವಾರದಿಂದ ಪ್ರಥಮ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಮುಸ್ಕಾನ್ ಹಾಗೂ ಶಫಾ ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, ಇಬ್ಭರೂ ಗೈರಾಗಿದ್ದಾರೆ. 120 ವಿದ್ಯಾರ್ಥಿನಿಯರ ಪೈಕಿ 118 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪ್ರಾಂಶುಪಾಲ ರುದ್ರೇಗೌಡ ಮಾಹಿತಿ ನೀಡಿದರು.