ಬೆಂಗಳೂರು: ‘ಕೆ.ಎಸ್. ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಪರಿಣಾಮವನ್ನು ಬಿಜೆಪಿ ಎದುರಿಸಬೇಕಾಗುತ್ತದೆ’ ಎಂದು ಹಿಂದುಳಿದ ಸಮುದಾಯಗಳ ಮಠಾಧೀಶರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಸರೂರು ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ಶಿವಾಚಾರ್ಯ ಸ್ವಾಮೀಜಿ, ಮಕಣಾಪುರ ಅಮೋಘಸಿದ್ದೇಶ್ವರ ಗುರುಪೀಠದ ಸೋಮಲಿಂಗೇಶ್ವರ ಸ್ವಾಮೀಜಿ, ಅಥಣಿಯ ಅಮರೇಶ್ವರ ಸ್ವಾಮೀಜಿ, ತುಮಕೂರಿನ ಬಿಂದುಶೇಖರ ಒಡೆಯರು, ಅರಿಕೇರಿ ಮಠದ ಅಪ್ಪು ಒಡೆಯರು, ಹುಲಜಂತಿಯ ಮಾಳಿಂಗರಾಯ ಸ್ವಾಮೀಜಿ ಅವರು ನಗರದಲ್ಲಿರುವ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಶಾಂತಮಯ ಶಿವಾಚಾರ್ಯ ಸ್ವಾಮೀಜಿ, ‘ಈಶ್ವರಪ್ಪ ಅವರು ಪಕ್ಷಕ್ಕಾಗಿಯೇ ಬದುಕಿದವರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲು ಹಾಲುಮತ ಸಮುದಾಯದ ಕೊಡುಗೆ ಜಾಸ್ತಿ ಇದೆ. ಹಿರಿಯ ಜೀವಿಯಾಗಿರುವ ಈಶ್ವರಪ್ಪ ಅವರನ್ನು ಕಡೆಗಣಿಸಿದರೆ ಏನು ಮಾಡುತ್ತೇವೆ ಎಂಬುದನ್ನು ಈಗ ಹೇಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮಾಡಿ ತೊರಿಸುತ್ತೇವೆ’ ಎಂದು ಎಚ್ಚರಿಸಿದರು.
‘ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವೇ ಸಿಗಬೇಕಿತ್ತು. ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ. ಈಗ ಉಪಮುಖ್ಯಮಂತ್ರಿ ಸ್ಥಾನವನ್ನು ಕೊಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮವನ್ನು ಬಿಜೆಪಿ ಎದುರಿಸಲಿದೆ’ ಎಂದರು.
‘ಯಡಿಯೂರಪ್ಪ ಅವರಷ್ಟೇ ಸಮರ್ಥ ನಾಯಕ ಈಶ್ವರಪ್ಪ. ಇಬ್ಬರು ಒಟ್ಟಾಗಿಯೇ ಸೈಕಲ್ ತುಳಿದು ಬಿಜೆಪಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ನಂತರ ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೆವು. ಆದರೆ, ಅದು ಸಿಕ್ಕಿಲ್ಲ. ಈಗ ಉಪಮುಖ್ಯಮಂತ್ರಿ ಸ್ಥಾನವನ್ನು ಕೊಡಲೇಬೇಕು’ ಎಂದು ಸೋಮಲಿಂಗೇಶ್ವರ ಸ್ವಾಮೀಜಿ ಮತ್ತು ಅಥಣಿಯ ಅಮರೇಶ್ವರ ಸ್ವಾಮೀಜಿ ಒತ್ತಾಯಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post