ಟೋಕಿಯೊ: ಭಾರತ ಮಹಿಳಾ ಹಾಕಿ ತಂಡ ಟೋಕಿಯೋ ಒಲಂಪಿಕ್ಸ್ ನಲ್ಲಿ ಬ್ರಿಟನ್ ವಿರುದ್ಧ 1-4 ಅಂತರದ ಸೋಲು ಕಂಡಿದೆ. ಚಾಂಪಿಯನ್ಸ್ ತಂಡದ ವಿರುದ್ಧ ಸೋಲಿನ ಮೂಲಕ ಭಾರತಕ್ಕೆ ಪ್ರಾಥಮಿಕ ಹಂತದಲ್ಲೇ ಸತತ ಮೂರನೇ ಪರಾಜಯ ಇದಾಗಿದ್ದು, ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆಯುವುದಕ್ಕೆ ಹಿನ್ನೆಡೆಯುಂಟಾಗುವ ಸಾಧ್ಯತೆ ಇದೆ.
ಹನ್ನಾ ಮಾರ್ಟಿನ್ (2 ಹಾಗೂ 19 ನೇ ನಿಮಿಷದಲ್ಲಿ) ಲಿಲಿ ಓವ್ಸ್ಲೆ (41 ನೇ ನಿಮಿಷದಲ್ಲಿ) ಗ್ರೇಸ್ ಬಾಲ್ಸ್‌ಡನ್ (57 ನೇ ನಿಮಿಷ) ದಲ್ಲಿ ಗೋಲು ದಾಖಲಿಸುವ ಮೂಲಕ ಭಾರತ ತಂಡದ ವಿರುದ್ಧ ಮೇಲುಗೈ ಸಾಧಿಸಲು ಬ್ರಿಟನ್ ತಂಡಕ್ಕೆ ಸಾಧ್ಯವಾಯಿತು. ಪೂಲ್A ನಲ್ಲಿ ಬ್ರಿಟನ್ ಗೆ ಎರಡನೇ ಜಯ ಇದಾಗಿದೆ.
ಭಾರತದ ಪರ ಶರ್ಮಿಳಾ ದೇವಿ 23 ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಭಾರತಕ್ಕೆ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆಯುವುದಕ್ಕೆ ಈಗ ಅಂಕಗಳ ಅವಶ್ಯಕತೆ ಇದ್ದು, ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡ, ಅನಿವಾರ್ಯತೆ ಉಂಟಾಗಿದೆ. ಭಾರತ ಈಗಾಗಲೇ ನೆದರ್ಲ್ಯಾಂಡ್ ವಿರುದ್ಧ 1-5 ಅಂತರದ ಹಾಗೂ ಜರ್ಮನಿ ವಿರುದ್ಧ 0-2 ಅಂತರದ ಸೋಲು ಕಂಡಿದೆ.
Discussion about this post