ಉಳ್ಳಾಲ: ಮಾನವೀಯತೆಯ ಮುಂದೆ ಜಾತಿ, ಧರ್ಮದ ಗೋಡೆ ಇಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ಇನ್ನೊಂದು ಪ್ರಕರಣ ಸಾಕ್ಷಿಯಾಗಿದೆ. ಅನ್ನಾಹಾರವಿಲ್ಲದೆ, ಮಳೆಯಲ್ಲಿ ಒದ್ದೆಯಾಗಿ ಜ್ವರದಿಂದ ನಡುಗುತ್ತಿದ್ದ ಸುಬ್ರಹ್ಮಣ್ಯ ಎಂಬುವರಿಗೆ ಮುಸ್ಲಿಂ ಯುವತಿ ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಮಂಗಳೂರಿನ ಚಿನ್ನದ ಮಳಿಗೆಯಲ್ಲಿ ಕೆಲಸದಲ್ಲಿರುವ ಮಾಡೂರು ನಿವಾಸಿ ಶೇಖ್ ಖಲೀಲ್ ಎಂಬುವರ ಪುತ್ರಿ ಸಂಬ್ರೀನಾ ಬಾನು ಶನಿವಾರ ವೆನ್ಲಾಕ್ ಆಸ್ಪತ್ರೆಗೆ ತೆರಳಿದಾಗ ಸುಬ್ರಹ್ಮಣ್ಯ ತೀವ್ರ ಜ್ವರದಿಂದ ಆಸ್ಪತ್ರೆ ಹೊರಭಾಗದಲ್ಲಿ ನಡುಗುತ್ತಿರುವುದನ್ನು ನೋಡಿ ಮರುಕಪಟ್ಟು ನೀರು ಕುಡಿಸಿ ಊಟ ತರಿಸಿ ಕೊಟ್ಟರು. ಯುವಕನ ಪೂರ್ವಾಪರ ವಿಚಾರಿಸಿದಾಗ ಸುಬ್ರಹ್ಮಣ್ಯ, ಉಡುಪಿ ಜಿಲ್ಲೆ ಕಾಪು ನಿವಾಸಿ ಎಂದು ತಿಳಿಯಿತು. ಮನೆಯವರೊಂದಿಗೆ ಜಗಳಮಾಡಿ ಮನೆ ಬಿಟ್ಟು ಬಂದಿದ್ದು, ಕೈಯಲ್ಲಿ ಹಣವಿಲ್ಲದೆ ಊಟವೂ ಸಿಕ್ಕಿರಲಿಲ್ಲ. ಮಳೆಯಲ್ಲಿ ಒದ್ದೆಯಾಗಿದ್ದರಿಂದ ಜ್ವರವೂ ಬಂದಿತ್ತು.
ಅಸಹಾಯಕ ಸುಬ್ರಹ್ಮಣ್ಯನನ್ನು ಉಪಚರಿಸಿದ ಸಂಬ್ರೀನಾ, ಬ್ಲಡ್ ಡೋನರ್ಸ್ ಮತ್ತು ಎಂಎನ್‌ಜಿ ಫೌಂಡೇಶನ್ ಪದಾಧಿಕಾರಿ ಮಾಡೂರಿನ ಫಯಾಜ್ ಎಂಬುವರಿಗೆ ವಿಷಯ ತಿಳಿಸಿದ್ದರು. ಫಯಾಜ್ ಅವರ ಮೊಬೈಲ್ ಸಂಖ್ಯೆ ದಾಖಲಿಸಿ ಸುಬ್ರಹ್ಮಣ್ಯನನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಮನೆಯವರಿಗೆ ಮಾಹಿತಿ ನೀಡಲಾಯಿತು.