ಸಂಗ್ರಹ ಚಿತ್ರ
ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನ ಜನವಸತಿ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆದಿದ್ದು ದಾಳಿಯಲ್ಲಿ ಮಗು ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಪೊಲೀಸರು ತಿಳಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಸಮೀಪದಲ್ಲೇ ಎರಡು ರಾಕೆಟ್ ದಾಳಿ ನಡೆದಿರುವುದು ವರದಿಯಾಗಿರುವ ಬೆನ್ನಲ್ಲೇ ಈ ಸುದ್ದಿ ಹೊರ ಬಂದಿದೆ. ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿ ಮಗುವೊಂದು ಮೃತಪಟ್ಟಿರುವುದು ವರದಿಯಾಗಿದೆ. ಎರಡೂ ದಾಳಿಗಳ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ಯಾವುದೇ ಸಂಘನೆಯು ದಾಳಿಯ ಹೊಣೆ ಹೊತ್ತಿಲ್ಲ.
ವಾಹನವೊಂದರಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಆತ್ಮಾಹುತಿ ದಾಳಿಕೋರ ಸಾಗುತ್ತಿರುವಾಗ ಅಮೆರಿಕ ಪಡೆಗಳು ವಾಯು ದಾಳಿ ನಡೆಸಿರುವುದಾಗಿ ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನು ಇತ್ತೀಚೆಗಷ್ಟೇ ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿತ್ತು. ಪರಿಣಾಮ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ರಾಕೆಟ್ ದಾಳಿ ನಡೆದಿದೆ.
ಕಾಬೂಲ್ ನಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆಯುವ ಅಪಾಯವಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಕೆಟ್ ದಾಳಿ ನಡೆದಿದೆ.