ಮಂಗಳೂರು; ಆಗಸ್ಟ್ 29: ವಯಸ್ಸು ಶತಕದ ಹತ್ತಿರ ಇದ್ದರೂ ಟ್ರಾಫಿಕ್ ವಾರ್ಡನ್ ಚೀಫ್ ಆಗಿ ಯುವಕರು ನಾಚಿಸುವ ರೀತಿ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಜೋಸೆಫ್ ಗೊನ್ಸಾಲ್ವಿಸ್ ತಮ್ಮ 99ರ ಹರೆಯದಲ್ಲಿ ಕೆಲಸ ನಿಲ್ಲಿಸಿದ್ದಾರೆ. ಕೆಲ ದಿನಗಳಿಂದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋನ್ಸಾಲ್ವಿಸ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಜನವರಿ 1,1921ರಂದು ಜನಿಸಿದ್ದ ಗೊಲ್ಸಾಲ್ವಿಸ್ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದರು. ತೊಂಭತ್ತರ ದಶಕದಲ್ಲಿಯೂ ಕೂಡಾ ಅವರು ಯುವಕರಂತೆ ಸಾರ್ವಜನಿಕ ಸೇವೆಯನ್ನು ಮುಂದುವರಿಸಿದ್ದರು. ಅವರು 100 ವರ್ಷಗಳನ್ನು ಪೂರೈಸಲು ಕೇವಲ ನಾಲ್ಕು ತಿಂಗಳುಗಳು ಮಾತ್ರವೇ ಬಾಕಿ ಇದ್ದವು.
ಫಳ್ನೀರ್ ನಿವಾಸಿಯಾಗಿರುವ ಜೋ ಗೊಲ್ಸಾಲ್ವಿಸ್ ಅವರು, ಬ್ರಿಟಿಷ್ ಸಂಸ್ಥೆ ಜೆ.ಎಲ್ ಮೋರಿಸನ್‌ನಲ್ಲಿ ಕೆಲಸ ಮಾಡುತ್ತಿದ್ದು, ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಸೇರ್ಪಡೆಗೊಂಡಿದ್ದರು. ನಂತರ ಅವರು ಕಂಪೆನಿಯ ಕಾರ್ಯನಿರ್ವಾಹಕ ನಿದೇಶಕರಾಗಿ ಸೇವೆ ಸಲ್ಲಿಸಿದ್ದರು. ಲಂಡನ್‌ನ ಇನ್‌ಸ್ಟಿಟ್ಯೂಟ್ ಆಫ್ ಮಾರ್ಕೆಟಿಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಆ ಸಂಸ್ಥೆಯ ಚುನಾಯಿತ ಸದಸ್ಯರೂ ಆಗಿದ್ದರು.
ಕಂಪನಿ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಶಿಕ್ಷಣ ಸಂಸ್ಥೆಗಳು ಮತ್ತು ಚಾರಿಟಿ ಸಂಸ್ಥೆಗಳಲ್ಲಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಉತ್ತರ ಅಮೆರಿಕಾದಲ್ಲಿ ಮಂಗಳೂರಿನ ಸೈಂಟ್ ಅಲೋಸಿಯಸ್ ಅಲ್ಯುಮ್ನಿ ಅಸೋಸಿಯೇಶನ್ ಹೆಸರಲ್ಲಿ ಸಂಘಟನೆಯ ಸ್ಥಾಪಕರಾಗಿದ್ದರು. ನಿವೃತ್ತಿಯ ಬಳಿಕ ಮಂಗಳೂರಿನಲ್ಲಿದ್ದ ವೇಳೆ ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಅದರಂತೆ, 2015ರಲ್ಲಿ ಟ್ರಾಫಿಕ್ ವಾರ್ಡನ್ ಸೇವೆ ಆರಂಭಿಸಿದ್ದಲ್ಲದೆ ತಮ್ಮ 94ರ ವಯಸ್ಸಿನಲ್ಲಿ ಚೀಫ್ ವಾರ್ಡನ್ ಆಗಿ ಸೇವೆ ಆರಂಭಿಸಿದ್ದರು.
ಜೋ ಗೊಲ್ಸಾಲ್ವಿಸ್ ಯೋಗ ಉತ್ಸಾಹಿಯಾಗಿದ್ದು, ಅನೇಕರಿಗೆ ಮಾದರಿಯಾಗಿದ್ದರು. ಆರೋಗ್ಯಕರ ಜೀವನ ಮುನ್ನಡೆಸಲು ಕಾರ್ಯಕ್ರಮಗಳನ್ನು ನಡೆಸಿದ್ದರು. ತಮ್ಮ ಜೀವನದ ಕೊನೆಯವರೆಗೂ ಜೋ ಗೊಲ್ಸಾಲ್ವಿಸ್ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post