ಮಂಗಳೂರು, ಸೆ.28: ಬ್ಯಾಂಕಿಗೆ ಹಣ ಕಟ್ಟಲು ತೆರಳುತ್ತಿದ್ದ ಪೆಟ್ರೋಲ್ ಪಂಪ್ ಮ್ಯಾನೇಜರ್ ಮೇಲೆ ಹಲ್ಲೆಗೈದು 4.20 ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿಕೊಂಡು ಹೋದ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.
ನಗರದ ಗಾಂಧಿ ನಗರದ ಆಶೀರ್ವಾದ್ ಪೆಟ್ರೋಲ್ ಪಂಪ್ ಮ್ಯಾನೇಜರ್ ಭೋಜಪ್ಪ (57) ಮಧ್ಯಾಹ್ನ 12.30ರ ಸುಮಾರಿಗೆ ಚಿಲಿಂಬಿಯ ಸಾರಸ್ವತ್ ಬ್ಯಾಂಕ್ ಶಾಖೆಗೆ ನಗದು ಕಟ್ಟಲೆಂದು 4.20 ಲಕ್ಷ ಹಣವನ್ನು ಬ್ಯಾಗಿನಲ್ಲಿ ಇಟ್ಟು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಭೋಜಪ್ಪ ಚಿಲಿಂಬಿಯಲ್ಲಿ ಬೈಕನ್ನು ಯು ಟರ್ನ್ ಮಾಡಿ ಬರುತ್ತಿದ್ದಾಗ ಅಲ್ಲಿ ಸ್ವಿಗ್ಗಿ ಟೀ ಶರ್ಟ್ ಹಾಕ್ಕೊಂಡು ಬೈಕಿನಲ್ಲಿ ನಿಂತಿದ್ದ ಇಬ್ಬರು ಕ್ರಿಕೆಟ್ ಬ್ಯಾಟಿನಲ್ಲಿ ಹಲ್ಲೆ ನಡೆಸಿದ್ದಾರೆ.
ಭೋಜಪ್ಪ ಅವರ ತಲೆ, ಭುಜಕ್ಕೆ ಬ್ಯಾಟಿನಲ್ಲಿ ಪೆಟ್ಟು ನೀಡಿದ್ದು, ಅವರಲ್ಲಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಭೋಜಪ್ಪ ಅವರು ಸೋಮವಾರ ಪೆಟ್ರೋಲ್ ಪಂಪಿನಲ್ಲಿ ಕಲೆಕ್ಷನ್ ಆಗಿದ್ದ 7.50 ಲಕ್ಷ ನಗದನ್ನು ಬ್ಯಾಂಕಿಗೆ ತೆರಳಿ ಕಟ್ಟಿದ್ದರು. ಇಂದು ಮಧ್ಯಾಹ್ನ ಅದೇ ರೀತಿ ಹಣ ಕಟ್ಟುವುದಕ್ಕಾಗಿ ಬ್ಯಾಂಕಿಗೆ ತೆರಳುತ್ತಿದ್ದಾಗ ದರೋಡೆ ಕೋರರು ಮೊದಲೇ ಹೊಂಚು ಹಾಕಿದ್ದು ಹಲ್ಲೆಗೈದು ಹಣವನ್ನು ದರೋಡೆ ನಡೆಸಿದ್ದಾರೆ.