ಮಂಗಳೂರು: ‘ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆಯನ್ನು ನಮ್ಮದೇ ಹುಡುಗರು ಮಾಡಿದ್ದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಬೇಕು ಎಂದು ಫಾಜಿಲ್ ತಂದೆ ಉಮರ್ ಫಾರೂಕ್ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ. ಅವರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ ಈ ಕುರಿತು ಸೋಮವಾರ ಮನವಿ ಸಲ್ಲಿಸಿದರು.
‘ಫಾಝಿಲ್ ಹತ್ಯೆಯನ್ನು ತುಮಕೂರಿನಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಶರಣ್ ಪಂಪ್‌ವೆಲ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಮಗನ ಹತ್ಯೆ ವಿಚಾರವಾಗಿ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು’ಎಂದು ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉಮರ್ ಫಾರೂಕ್, ಶರಣ್ ಪಂಪ್ವೆಲ್ ನನ್ನ ಮಗನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಒಬ್ಬ ಹುಡುಗನನ್ನು ಹೊಡೆದಿದ್ದನ್ನು ಶೌರ್ಯ ಎಂದಿದ್ದಾನೆ. ಇದು ನಿಜವಾದ ಶೌರ್ಯ ಅಲ್ಲ, ಅದು ಹೇಡಿತನ. ಶರಣ್ ಪಂಪ್ವೆಲ್ ಗೆ ತಾಕತ್ ಇದ್ರೆ ನಾನು ಒಬ್ಬನೇ ಬರುತ್ತೇನೆ. ನನ್ನ ಜೊತೆ ಕಾದಾಡಲಿ, ನಾನು ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಸುರತ್ಕಲ್ ಠಾಣೆಗೆ ತೆರಳಿ ದೂರು ನೀಡಲು ಕಮೀಷನರ್ ಹೇಳಿದ್ದಾರೆ. ಕೊಲೆ ಪ್ರಕರಣವನ್ನು ಸಂಪೂರ್ಣ ಮರು ತನಿಖೆ ಮಾಡಬೇಕು. ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಿ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು. ಆದರೆ ಕೊಲೆಯ ಸೂತ್ರಧಾರರು ಯಾರೆಂದು ಪತ್ತೆ ಮಾಡಿರಲಿಲ್ಲ. ಶರಣ್ ಹೇಳಿಕೆಯಿಂದ ಈತನೇ ಸೂತ್ರಧಾರ ಎನ್ನುವುದು ತಿಳಿದುಬರುತ್ತಿದೆ. ಬಂಧಿಸಿ ತನಿಖೆ ನಡೆಸಿದರೆ ನೈಜಾಂಶ ಹೊರಬಹುದು ಎಂದು ಫಾಝಿಲ್ ತಂದೆ ಉಮರ್ ಫಾರೂಕ್ ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post