ಪೊಷೆಫ್‌ಸ್ಟ್ರೂಮ್: 19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಇದೇ ಮೊದಲ ಆಯೋಜನೆಗೊಂಡಿರುವ ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಎತ್ತಿ ಹಿಡಿದಿದೆ.
ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ 68 ರನ್ ಗಳಿಸಿ ಆಲೌಟ್ ಆಯಿತು. 69 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಭಾರತದ ಪರ ಗೊಂಗಡಿ ತ್ರಿಷಾ 24, ಸೌಮ್ಯ ತಿವಾರಿ ಔಟಾಗದೆ 24 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. 19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಅನ್ನು ಇದೇ ಮೊದಲ ಸಲ ಆಯೋಜಿಸಲಾಗಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಶಫಾಲಿ ಪಡೆ ಚಾರಿತ್ರಿಕ ಸಾಧನೆ ಮಾಡಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಯುವಪಡೆಯ ನಾಯಕತ್ವದ 19 ವರ್ಷದ ಶಫಾಲಿ ಇತಿಹಾಸ ಬರೆದಿದ್ದಾರೆ. ಭಾರತದ ಸೀನಿಯರ್ ಮಹಿಳಾ ತಂಡವು ಇದುವರೆಗೂ ಯಾವುದೇ ಮಾದರಿಯಲ್ಲಿಯೂ ವಿಶ್ವಕಪ್ ಜಯಿಸಿಲ್ಲ. ಹೋದ ವರ್ಷ ವಿಶ್ವಕಪ್ ಫೈನಲ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿದ್ದ ಮಹಿಳಾ ತಂಡದಲ್ಲಿ ಶಫಾಲಿ ಕೂಡ ಆಡಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಆಕ್ರಮಣಕ್ಕೆ ಪತರಗುಟ್ಟಿ ರನ್ ಗಳಿಸಲು ಪರದಾಡಿತು. ಇಂಗ್ಲೆಂಡ್ ನಾಲ್ಕು ಮಂದಿ ಆಟಗಾರ್ತಿಯರು ಮಾತ್ರ ಎರಡಂಕಿ ಮೊತ್ತ ಕಲೆ ಹಾಕಿದರೆ, 7 ಮಂದಿ ಆಟಗಾರ್ತಿಯರು ಒಂದಂಕಿಗೇ ಔಟಾಗಿದ್ದಾರೆ. ಅದರಲ್ಲೂ ಮೂರು ಮಂದಿ ಶೂನ್ಯ ಸುತ್ತಿರುವುದು ಭಾರತದ ಬೌಲಿಂಗ್ ಪಾರಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಭಾರತದ ಪರ ಟೈಟಸ್ ಸಾಧು, ಅರ್ಚನಾ ದೇವಿ, ಪಾರ್ಸವಿ ಚೋಪ್ರಾ ತಲಾ 2 ವಿಕೆಟ್ ಪಡೆದರೆ, ಮನ್ನತ್ ಕಶ್ಯಪ್, ನಾಯಕಿ ಶೆಫಾಲಿ ವರ್ಮಾ, ಸೋನಮ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
Discussion about this post