ಅಹಮದಾಬಾದ್: ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುಜರಾತ್ ಟೈಟನ್ಸ್ ತಂಡದ ಕನಸು ಕಮರಿತು. ಸೋಮವಾರ ತಡರಾತ್ರಿ ಮುಕ್ತಾಯವಾದ ಫೈನಲ್‌ನಲ್ಲಿ ಚೆನ್ನೈ ತಂಡವು 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಮಳೆ ಸುರಿದಿದ್ದರಿಂದ ಪರಿಷ್ಕತ ಗೊಂಡಿದ್ದ (ಡಕ್ವರ್ಥ್ ಲೂಯಿಸ್ ನಿಯಮ) 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ 10 ರನ್‌ಗಳ ಅಗತ್ಯ ಇತ್ತು.
ರವೀಂದ್ರ ಜಡೇಜ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಉಸಿರು ಬಿಗಿಹಿಡಿದು ಕುಳಿತಿದ್ದ ಚೆನ್ನೈ ಅಭಿಮಾನಿಗಳು ಸಂಭ್ರಮದಿಂದ ಪುಟಿದೆದ್ದರು. ಚೆನ್ನೈ ತಂಡವು ಐದನೇ ಬಾರಿ ಪ್ರಶಸ್ತಿ ಗೆದ್ದಿತು. ಗುಜರಾತ್ ತಂಡದ ಮೋಹಿತ್ ಶರ್ಮಾ (36ಕ್ಕೆ3) ಹಾಗೂ ಸಾಯಿ ಸುದರ್ಶನ್ (96 ರನ್) ಅವರ ಪ್ರಯತ್ನಗಳಿಗೆ ಗೆಲುವಿನ ಫಲ ಸಿಗಲಿಲ್ಲ.
ನಾಲ್ಕು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಸುದರ್ಶನ್ (96; 47ಎ) ಗುಜರಾತ್ ಟೈಟನ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನಿಂಗ್ಸ್‌ನಲ್ಲಿ ಮೊದಲ ಓವರ್ ಮೂರು ಎಸೆತಗಳು ಆದಾಗ ಮಳೆ ಸುರಿಯಲು ಆರಂಭಿಸಿತು. ಇದರಿಂದಾಗಿ ಗುರಿಯನ್ನು ಪರಿಷ್ಕರಿಸಲಾಯಿತು. ತಡರಾತ್ರಿ 12.10ಕ್ಕೆ ಆಟ ಆರಂಭಿಸಲಾಯಿತು. ಆರಂಭಿಕ ಜೋಡಿ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ 6.3 ಓವರ್‌ಗಳಲ್ಲಿ 74 ರನ್ ಸೇರಿಸಿದರು. ಶಿವಂ ದುಬೆ (32 ರನ್), ಅಜಿಂಕ್ಯ ರಹಾನೆ (27 ರನ್) ಹಾಗೂ ಅಂಬಟಿ ರಾಯುಡು (19 ರನ್) ಮಹತ್ವದ ಕಾಣಿಕೆ ನೀಡಿದರು.
𝗗𝗢 𝗡𝗢𝗧 𝗠𝗜𝗦𝗦!
Two shots of excellence and composure!
Finishing in style, the Ravindra Jadeja way 🙌#TATAIPL | #Final | #CSKvGT pic.twitter.com/EbJPBGGGFu
— IndianPremierLeague (@IPL) May 29, 2023
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಬಳಿಕ ಮಳೆ ಬಂದು ಆಟ ಸ್ಥಗಿತವಾಗಿತ್ತು. ಬಳಿಕ ಆಟ ಪ್ರಾರಂಭವಾದಾಗ ಅಂಪೈರ್ ಗಳು ಗುರಿಯನ್ನು ಪರಿಷ್ಕರಿಸಿದ್ದು 15 ಓವರ್ ನಲ್ಲಿ 171 ರನ್ ಗಳ ಬೃಹತ್ ಗುರಿಯನ್ನು ನಿಗದಿ ಪಡಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರ ವಿರೋಚಿತ ಜಯ ದಾಖಲಿಸಿತು.ಆ ಮೂಲಕ 5ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಅಂತಿಮವಾಗಿ ರವೀಂದ್ರ ಜಡೇಜಾ ಮತ್ತು ದುಬೆ ಗೆಲುವಿನ ಔಪಚಾರಿಕತೆ ಮುಗಿಸಿದರು. ಅಂತಿಮ ಓವರ್ ನಲ್ಲಿ ಗೆಲ್ಲಲು 13ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಬೌಲಿಂಗ್ ಗೆ ಇಳಿದ ಮೋಹಿತ್ ಶರ್ಮಾ ಬಿಗುವಿನ ಬೌಲಿಂಗ್ ದಾಳಿ ನಡೆಸಿದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ನೀಡಿ ಒತ್ತಡ ಹೇರಿದರು. ಆದರೆ 5ನೇ ಎಸೆತದಲ್ಲಿ ಜಡೇಜಾ ಸಿಕ್ಸರ್ ಸಿಡಿಸಿದರು. ಆಗ ಅಂತಿಮ ಎಸೆತದಲ್ಲಿ ಗೆಲ್ಲಲು 4 ರನ್ ಗಳ ಅವಶ್ಯಕತೆ ಇದ್ದಾಗ ಜಡ್ಡು ಮೋಹಿತ್ ಎಸೆದ ಫುಲ್ ಟಾಸ್ ಎಸೆತವನ್ನು ಶಾರ್ಟ್ ಫೈನ್ ನತ್ತ ತಳ್ಳಿ ಬೌಂಡರಿ ಪಡೆದರು. ಆ ಮೂಲಕ ಚೆನ್ನೈ ತಂಡ ಫೈನಲ್ ನಲ್ಲಿ 5 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು. ಗುಜರಾತ್ ಪರ ನೂರ್ ಅಹ್ಮದ್ 2 ವಿಕೆಟ್ ಪಡೆದರೆ ಮೋಹಿತ್ ಶರ್ಮಾ 3 ವಿಕೆಟ್ ಪಡೆದರು.