ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ತೀವ್ರ ಜಲಾವೃತಗೊಂಡು ಮುಳುಗಡೆಯಾಗುವ ಭೀತಿಯಲ್ಲಿದ್ದ ಉಡುಪಿ ಮೂಲದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಸಿಬ್ಬಂದಿ ರೋಮಾಂಚಕ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸೋಮವಾರ ಸಂಜೆ ಸುರತ್ಕಲ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲಿ ದೂರದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಎಲ್ಲರೂ ಪಾರಾಗಿದ್ದಾರೆ.
ಸೋಮವಾರ ಸಂಜೆ ಉಡುಪಿ ಮೂಲದ ‘ಮಂಜು ಮಾತಾ’ ಎಂಬ ಫೈಬರ್ ಗ್ಲಾಸ್ ಮೀನುಗಾರಿಕಾ ಬೋಟ್ ಸಮುದ್ರದ ಮಧ್ಯೆ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿತ್ತು. ಇದರಿಂದಾಗಿ ಬೋಟಿನ ತಳಭಾಗಕ್ಕೆ (ಹಲ್) ಹಾನಿಯಾಗಿ, ಒಳಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಲು ಆರಂಭಿಸಿತ್ತು. ಬೋಟ್ ಮುಳುಗುವ ಹಂತ ತಲುಪುತ್ತಿದ್ದಂತೆ ಕಂಗಾಲಾದ ಮೀನುಗಾರರು ತಕ್ಷಣವೇ ತುರ್ತು ರಕ್ಷಣೆಗಾಗಿ ಸಂದೇಶ ರವಾನಿಸಿದ್ದರು. ಈ ಸಂದೇಶವನ್ನು ಸಮುದ್ರದಲ್ಲಿ ಗಸ್ತಿನಲ್ಲಿದ್ದ ಭಾರತೀಯ ಕೋಸ್ಟ್ ಗಾರ್ಡ್‌ನ ‘ಸಚೇತ್’ ಹಡಗು ಯಶಸ್ವಿಯಾಗಿ ಗ್ರಹಿಸಿದೆ. ಆರು ಮೀನುಗಾರರ ಜೀವಕ್ಕೆ ಕುತ್ತು ಬಂದಿರುವುದನ್ನು ಅರಿತ ಕೋಸ್ಟ್ ಗಾರ್ಡ್ ಅಧಿಕಾರಿಗಳು ಸಮಯ ವ್ಯರ್ಥ ಮಾಡದೆ ತಕ್ಷಣವೇ ಸಚೇತ್ ಹಡಗನ್ನು ಸಂಕಷ್ಟದಲ್ಲಿದ್ದ ಬೋಟ್ ಕಡೆಗೆ ತಿರುಗಿಸಿದರು.
ಮುಳುಗುತ್ತಿದ್ದ ಮೀನುಗಾರಿಕಾ ಬೋಟನ್ನು ಪತ್ತೆ ಹಚ್ಚಿ 90 ನಿಮಿಷಗಳ ಕಾಲ ಸವಾಲಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ರಿಮೋಟ್ ಆಪರೇಟೆಡ್ ಲೈಫ್ ಬಾಯ್ಸ್ ಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಿ, ಮೀನುಗಾರರನ್ನು ರಕ್ಷಿಸಲಾಗಿದೆ.


Discover more from Coastal Times Kannada
Subscribe to get the latest posts sent to your email.







Discussion about this post