ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಮೊದಲ ದಿನವೇ ರಜತ ಪದಕ ಗೆದ್ದು ಬೀಗಿದ್ದರು. ಇದರ ಬೆನ್ನಲ್ಲೇ ಭಾರತದ ಕ್ರೀಡಾಪ್ರೇಮಿಗಳು ಭಾರಿ ಸಂಭ್ರಮದಲ್ಲಿ ಮುಳುಗಿದ್ದರು. ಇದಾಗಿ 2 ದಿನಗಳ ಬಳಿಕ ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನವಾಗಿ ಬದಲಾಗಲಿದೆ ಎಂಬ ಸುದ್ದಿ ಹರಡಿತ್ತು. ಇದು ಭಾರತೀಯರ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತ್ತು. ಆದರೆ ಅದು ಫೇಕ್ ನ್ಯೂಸ್ ಎಂಬುದು ಇದೀಗ ಖಚಿತಪಟ್ಟಿದೆ.
ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಅವರನ್ನು ಮೀರಿಸಿ ಚಿನ್ನ ಗೆದ್ದಿದ್ದ ಚೀನಾದ ವೇಟ್‌ಲ್ಟಿರ್ ಝಿಹುಯಿ ಹೌ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ. ಅವರನ್ನು ಸಂಘಟಕರು 2 ದಿನಗಳ ಬಳಿಕ ಮತ್ತೆ ಉದ್ದೀಪನ ಪರೀಕ್ಷೆಗೆ ಕರೆದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ ಎಂದು ವರದಿಯಾಗಿತ್ತು. ಆದರೆ ಝಿಹುಯಿ ಅವರನ್ನು ಡೋಪಿಂಗ್ ಪರೀಕ್ಷೆಗೆ ಕರೆದಿರಲಿಲ್ಲ ಎಂದು ಚೀನಾದ ಅಧಿಕಾರಿಗಳಿಂದ ಸ್ಪಷ್ಟನೆ ಲಭಿಸಿದೆ. ಸುದ್ದಿಸಂಸ್ಥೆ ಎಎನ್‌ಐ ಕೂಡ ತನ್ನ ಹಿಂದಿನ ವರದಿ ಸರಿಯಾಗಿರಲಿಲ್ಲ, ಝಿಹುಯಿ ಚಿನ್ನ ಮತ್ತು ಮೀರಾಬಾಯಿ ಅವರು ಬೆಳ್ಳಿ ಪದಕವನ್ನೇ ಉಳಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಈ ಸುದ್ದಿ ಭಾರತ ಮಾತ್ರವಲ್ಲದೆ ಏಷ್ಯಾದೆಲ್ಲೆಡೆ ವರದಿಯಾಗಿತ್ತು. ಹೀಗಾಗಿ ಏಷ್ಯಾದ ಪ್ರಮುಖ ಸುದ್ದಿ ಸಂಸ್ಥೆ ‘ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್’ ಕೂಡ ಈ ಬಗ್ಗೆ ಸ್ಪಷ್ಟನೆಯ ವರದಿಯನ್ನು ಪ್ರಕಟಿಸಿದೆ. ಝಿಹುಯಿ ಅವರನ್ನು 2ನೇ ಬಾರಿ ಡೋಪಿಂಗ್ ಪರೀಕ್ಷೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ವಿಶ್ವ ಉದ್ದೀಪನ ನಿಗ್ರಹ ಘಟಕದ (ವಾಡಾ) ಬಳಿಯೇ ಯಾವುದೇ ಮಾಹಿತಿ ಇಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉದ್ದೀಪನ ಪರೀಕ್ಷೆಗಳನ್ನು ನಡೆಸುತ್ತಿರುವ ಅಂತಾರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಗೂ (ಐಟಿಎ) ಈ ಬಗ್ಗೆ ಏನೂ ಮಾಹಿತಿ ಇಲ್ಲ. ಇಂಥ ವರದಿಗಳು ಎಲ್ಲಿಂದ ಬಂದವು ಗೊತ್ತಿಲ್ಲ. ನಾವು ಎಲ್ಲ ಪರೀಕ್ಷೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ. ಯಾವುದನ್ನೂ ಗೌಪ್ಯವಾಗಿಡುವುದಿಲ್ಲ ಎಂದು ಐಟಿಎ ಅಧಿಕಾರಿ ತಿಳಿಸಿದ್ದಾರೆ. ಹಾದಿ ತಪ್ಪಿಸುವ ಸಲುವಾಗಿ ಈ ಸುದ್ದಿಯನ್ನು ಸೃಷ್ಟಿಸಲಾಗಿದೆ ಎಂದು ಚೀನಾದ ವೇಟ್‌ಲಿಫ್ಟಿಂಗ್ ಸಂಸ್ಥೆ ಆರೋಪಿಸಿದೆ.
ಭಾರತ ಮಾತ್ರವಲ್ಲದೆ ಚೀನಾ ತೈಪೆಯ ವೇಟ್‌ಲಿಫ್ಟರ್ 4ನೇ ಸ್ಥಾನ ಮತ್ತು ಇಂಡೋನೇಷ್ಯಾದ ಸ್ಪರ್ಧಿ 3ನೇ ಸ್ಥಾನ ಪಡೆದಿದ್ದ ಕಾರಣ ಅವರ ಪದಕಗಳು ಬೆಳ್ಳಿ ಮತ್ತು ಕಂಚಿಗೆ ಬಡ್ತಿ ಪಡೆಯಲಿವೆ ಎಂದು ಆ ದೇಶಗಳಲ್ಲೂ ಈ ಸುದ್ದಿ ವೈರಲ್ ಆಗಿತ್ತು.