ಮಂಗಳೂರು: ಲೈಂಗಿಕ ದೌರ್ಜನ್ಯ ಬಗ್ಗೆ ಇನ್ನೂ ಸರಿಯಾಗಿ ಅರಿಯದ 12 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗುವಂತೆ ಮಾಡಿದ ಕಿರಾತಕನೊಬ್ಬನನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬಾತನೇ ಬಂಧಿತ.
ಜುಲೈ 15ರಂದು 12 ವರ್ಷ 10 ತಿಂಗಳು ಪ್ರಾಯದ ಅಪ್ರಾಪ್ತ ಬಾಲಕಿ ತನ್ನ ತಾಯಿಯೊಂದಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ಒಂದು ದೂರು ನೀಡಿದ್ದಳು. ಹಾಗೆ ಬಂದಾಗ ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು. ಮಹಿಳಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಗ ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಂಕಷ್ಟದಲ್ಲಿರುವ ಬಾಲಕಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಆಕೆ ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಆಗಾಗ ಸಿಗುತ್ತಿದ್ದ ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬಾತ ಆಕೆಯ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಗಾಗ ಮಾತನಾಡಲು ಶುರು ಮಾಡಿದ್ದ. ಆಕೆಯ ಮನೆ ವಿಷಯ ತಿಳಿದುಕೊಂಡಿದ್ದ.
ಈ ನಡುವೆ 2023ರ ಜನವರಿ ತಿಂಗಳಲ್ಲಿ ಅಪ್ರಾಪ್ತ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ತಿಳಿದುಕೊಂಡ ಶಾಫಿ ಆವತ್ತು ಆಕೆಯ ಮನೆಗೆ ಬಂದಿದ್ದಾನೆ. ಪರಿಚಯದ ನೆಲೆಯಲ್ಲಿ ಮಾತು ಆರಂಭಿಸಿದ ಆತ ಬಾಲಕಿಯ ಬಾಯಿಗೆ ಕೈ ಹಿಡಿದು ಪಕ್ಕದ ರೂಮಿಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಅದಾದ ಬಳಿಕ ಆಕೆಯನ್ನು ಪುಸಲಾಯಿಸಿ ಮತ್ತು ಕೆಲವೊಮ್ಮೆ ಬ್ಲ್ಯಾಕ್‌ಮೇಲ್ ಮಾಡಿ ಇತರೇ ದಿನಗಳಲ್ಲೂ ಅವಳು ಒಬ್ಬಳೇ ಇದ್ದಾಗ ಆತನು ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ನಡುವೆ ಈಗ ಆಕೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆಯ ಹೊಟ್ಟೆ ದೊಡ್ಡದಾಗುತ್ತಿರುವುದು, ತಿಂಗಳ ಋತುಸ್ರಾವ ನಡೆಯದೆ ಇರುವುದನ್ನು ಗಮನಿಸಿ ಮನೆಯವರು ವಿಚಾರಿಸಿದಾಗ ಈ ವಿಷಯ ಬಯಲಾಗಿದೆ.
ಅಪ್ರಾಪ್ತ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮತ್ತು ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಸೇರಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈ ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಲೋಕೇಶ್ ಎ.ಸಿ, ಅವರು ನಡೆಸುತ್ತಿದ್ದಾರೆ. ಮುಂದೆ ಬಾಲಕಿಯ ಆರೈಕೆ ಮತ್ತಿತರ ವಿಚಾರಗಳ ಬಗ್ಗೆ ಅವಲೋಕನ ನಡೆಯಬೇಕಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post