ಮಂಗಳೂರು, ಜುಲೈ 30: ಮಂಗಳೂರು-ಮೂಡುಬಿದಿರೆ ಹೆದ್ದಾರಿಯ ಎಡಪದವು ಬಳಿ ಹೊಸತಾಗಿ ನಿರ್ಮಿಸಿರುವ ಹೆದ್ದಾರಿ ಕಳೆದ ಕೆಲವು ದಿನದ ಮಳೆಯಿಂದಾಗಿ ಭಾಗಶಃ ಕುಸಿತಗೊಂಡಿದೆ. ಅಡಿಕೆ ತೋಟವಿದ್ದ ಜಾಗಕ್ಕೆ 35 ಮೀಟರ್ ಮಣ್ಣು ಸುರಿದು ಮಾಡಿದ್ದ ಹೆದ್ದಾರಿ ಕಳಪೆ ಕಾಮಗಾರಿಯಿಂದ ಕುಸಿದು ಹೋಗಿದೆ.
ಇದೇ ವೇಳೆ, ಮಂಗಳೂರಿನಿಂದ ಎಡಪದವು ಪೇಟೆಯ ಮೂಲಕ ಮೂಡುಬಿದಿರೆ ಹೋಗುವ ಪರ್ಯಾಯ ರಸ್ತೆಯ ಮೇಲ್ಬಾಗದ ಗುಡ್ಡವೂ ಕುಸಿಯುವ ಭೀತಿ ಎದುರಾಗಿದ್ದು ಇದರಿಂದಾಗಿ ಮೂಡುಬಿದಿರೆ ಮಂಗಳೂರು ಹೆದ್ದಾರಿಯೇ ಸಂಚಾರ ಸ್ಥಗಿತದ ಆತಂಕದಲ್ಲಿದೆ. ತಿಂಗಳ ಹಿಂದೆಯೇ ಮೊದಲ ಮಳೆಗೆ ಎಡಪದವು ಮುಚ್ಚೂರು ಕ್ರಾಸ್ ಬಲಭಾಗದಲ್ಲಿ ಗುಡ್ಡ ಕುಸಿದು ಆತಂಕಕ್ಕೆ ಕಾರಣವಾಗಿತ್ತು. ಈಗ ಅಲ್ಲಿಯೇ ತುಸು ಮುಂದೆ ಶಿಬಿಕೆರೆ ಭಾಗದಲ್ಲಿ ಎಡಪದವು ಬೈಪಾಸ್ ಮಾಡಲು ನಿರ್ಮಿಸಿರುವ ಚತುಷ್ಪಥ ಹೆದ್ದಾರಿಯು ಭಾಗಶಃ ಕುಸಿತಗೊಂಡಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ರಾ. ಹೆದ್ದಾರಿ 169ರ ಈ ಭಾಗವು ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿರುವ ಮಳೆಯಿಂದಾಗಿ ಕುಸಿತಗೊಂಡಿದೆ. ವರ್ಷದಿಂದ ಇಲ್ಲಿ ಹೆದ್ದಾರಿ ನಿರ್ಮಾಣ ನಡೆಯುತ್ತಿದೆ. ಮೂಲತಃ ನೀರು ಹರಿಯುವ ಹಾಗೂ ಅಡಿಕೆ, ತೆಂಗಿನ ತೋಟವಿರುವ ಈ ಭಾಗಕ್ಕೆ ಇನ್ನೊಂದು ಬದಿಯ ಗುಡ್ಡದಿಂದ ಟನ್ ಗಟ್ಟಲೆ ಮಣ್ಣು ಸುರಿದು ಸುಮಾರು 35 ಅಡಿಗಳಷ್ಟು ಎತ್ತರಕ್ಕೇರಿಸಿ ಈ ರಸ್ತೆ ನಿರ್ಮಿಸಲಾಗಿದೆ. ಗುಡ್ಡದ ಒಂದು ಬದಿಯಿಂದ ನೀರು ಹರಿದು ಹೋಗುತ್ತಿದ್ದ ಜಾಗವಿದು. ಇಲ್ಲಿ ಸಣ್ಣದಾಗಿ ಒಂದು ಚರಂಡಿಯನ್ನು ರಸ್ತೆಗಡ್ಡವಾಗಿ ಎಂದರೆ 35 ಅಡಿಯಷ್ಟು ತಳಭಾಗದಲ್ಲಿ ನಿರ್ಮಿಸಲಾಗಿದೆ.
ಆದರೆ ಭಾರೀ ಮಳೆ, ಪ್ರವಾಹದಿಂದ ಈ ಚರಂಡಿ ಮಣ್ಣು, ಕೆಸರು ತುಂಬಿ ಬ್ಲಾಕ್ ಆಗಿದೆ. ಇದರಿಂದಾಗಿ ನೀರು ಹರಿದು ಹೋಗದೆ ರಸ್ತೆಯ ಒಂದು ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ನಿಂತಿದೆ. ಸುಮಾರು ದೂರಕ್ಕೂ ಅಡಿಕೆ ತೆಂಗಿನ ಮರ ಇರುವ ನಾಲ್ಕು ಎಕ್ರೆ ತೋಟದಲ್ಲಿ ಅಡಿಗಟ್ಟಲೆ ನೀರು ನಿಂತಿದೆ. ಒಂದು ತಿಂಗಳಿನಿಂದಲೇ ನೀರು ಹರಿದು ಹೋಗದೆ ಇದೇ ರೀತಿ ನಿಂತ ಕಾರಣ ಮರಗಳೇ ಕೊಳೆತು ಹೋಗುವ ಭೀತಿ ಇದೆ ಎಂದು ಸ್ಥಳೀಯರಾದ ಜಾನ್ ಡಿ’ಸೋಜಾ ಹಾಗೂ ಸುದರ್ಶನ್ ಅವರು ಮಾಧ್ಯಮದ ಜತೆ ಅಳಲು ತೋಡಿಕೊಂಡಿದ್ದಾರೆ.
“ಕಳೆದ ವರ್ಷ ಮಾರ್ಚ್‌ನಲ್ಲಿ ಡಿಸಿ, ಎನ್‌ಎಚ್‌ಎಐಗೆ ಮನವಿ ಕೊಟ್ಟಿದೆವು. ಒಂದು ಭಾಗ ಗುಡ್ಡ ಗುಡ್ಡ ಇದ್ದು, 35 ಅಡಿ ಎತ್ತರದ ಹೆದ್ದಾರಿ ಮಾಡಿರುವ ಕಾರಣ ಮಳೆ ನೀರು ನಿಂತು ಕುಸಿಯಬಹುದು ಎನ್ನುವ ಬಗ್ಗೆ ದೂರು ಕೊಟ್ಟಿದ್ದವು. ಆದರೆ ಅಧಿಕಾರಿಗಳು ಗಮನ ಕೊಡಲಿಲ್ಲ. ನಮಗೆ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ಸರ್ವಿಸ್ ರಸ್ತೆ, ಅಂಡರ್ ಪಾಸ್ ಕೇಳಿದ್ದೆವು. ಏನೂ ಮಾಡಿಕೊಡಲಿಲ್ಲ, ಈಗ ಅನುಭವಿಸಬೇಕಾದ ಸ್ಥಿತಿ ಬಂದಿದೆ ಎಂದು ಸ್ಥಳೀಯರು ಅಳಲು ಹೇಳಿಕೊಂಡಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಡಿಕ, ತೆಂಗಿನ ಮರ ಇರುವ ನಾಲ್ಕು ಎಕ್ರೆ ತೋಟದಲ್ಲಿ 2-3 ಅಡಿ ನೀರು ನಿಂತಿದೆ. ಒಂದು ತಿಂಗಳಿನಿಂದ ನೀರು ಹರಿದು ಹೋಗದೆ ಇದೇ ರೀತಿ ನಿಂತ ಕಾರಣ ಮರಗಳೇ ಕೊಳೆತು ಹೋಗುವ ಭೀತಿ ಇದೆ ಎಂದು ಸ್ಥಳೀಯರಾದ ಜಾನ್ ಡಿ’ಸೋಜಾ ಹಾಗೂ ಸುದರ್ಶನ್ ಅವರು ಅಳಲು ತೋಡಿಕೊಂಡಿದ್ದಾರೆ. ಮುಚ್ಚೂರು ಹೋಗುವ ರಸ್ತೆಯ ಮೇಲ್ಬಾಗದಲ್ಲಿ ಜೆಸಿಬಿ ಮೂಲಕ ಮಣ್ಣು, ಬಂಡೆ ತೆರವು ಮಾಡುವ ಕೆಲಸ ನಡೆದಿದೆ. ಆದರೆ ಮಳೆ ಇನ್ನೂ ಹೆಚ್ಚಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಗಿ ಎಡಪದವು ಗ್ರಾಮದ ತೋಟಕ್ಕೆ ನುಗ್ಗುವ ಸಾಧ್ಯತೆ ಇದೆ.
Discover more from Coastal Times Kannada
Subscribe to get the latest posts sent to your email.







Discussion about this post