ಬೆಳ್ತಂಗಡಿ, ಜುಲೈ 30: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ನಡೆಸಿದ ಉತ್ಖನನದ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೂವರ ಕುಟುಂಬಸ್ಥರಿಂದ ಸಂಗ್ರಹಿಸಿದ್ದ ಡಿಎನ್‌ಎ ಮಾದರಿಗಳನ್ನು ಅಸ್ಥಿಪಂಜರಗಳ ಡಿಎನ್‌ಎ ಜತೆ ಹೋಲಿಕೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಮೂರು ಅಸ್ಥಿಪಂಜರಗಳ ಡಿಎನ್‌ಎ ಕುಟುಂಬಸ್ಥರ ಮಾದರಿಗಳೊಂದಿಗೆ ಹೊಂದಾಣಿಕೆಯಾಗಿದೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆಗುಡ್ಡೆಯಲ್ಲಿ ಸೌಜನ್ಯಳ ಮಾವ ವಿಠಲ ಗೌಡ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು 2025 ಸೆ. 17 ಮತ್ತು 18 ರಂದು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆ ಹಚ್ಚಲಾಗಿದ್ದ ಏಳು ಅಸ್ಥಿಪಂಜರಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಕೆಲವೊಂದು ಐಡಿ ಕಾರ್ಡ್ಗಳು ಕೂಡ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಕುಟುಂಬದವರನ್ನು ಹುಡುಕಾಟ ನಡೆಸಿ ಕುಟುಂಬದವರ ಡಿಎನ್ಎ ಪರೀಕ್ಷೆಯನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಾಡಿ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದರ ವರದಿಯಲ್ಲಿ ಮೂವರ ಕುಟುಂಬದ ಡಿಎನ್ಎ ಅಸ್ಥಿಪಂಜರಕ್ಕೆ ತಾಳೆಯಾಗಿರುವುದು ವರದಿಯಿಂದ ಖಚಿತವಾಗಿದೆ.
ಪತ್ತೆಯಾದವರು ಯಾರು? : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27), ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿಯ ಕೃಷ್ಣಪ್ಪ (85) ಸೇರಿ ಮೂವರ ಅಸ್ಥಿಪಂಜರ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿರುವುದು ಡಿಎನ್ಎ ಪರೀಕ್ಷೆ ಮೂಲಕ ಖಚಿತವಾಗಿದೆ.
ಕೊಡಗು ಜಿಲ್ಲೆಯ ಯು.ಬಿ. ಅಯ್ಯಪ್ಪ (70) ಎಂಬವರು 25-06-2017ರಲ್ಲಿ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದ ಬಗ್ಗೆ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ಕುಟುಂಬದವರು ದಾಖಲಿಸಿದ್ದರು.
ತುಮಕೂರು ಜಿಲ್ಲೆಯ ಆದಿಶೇಷ ನಾರಾಯಣ (27) ಎಂಬಾತ ಬೆಂಗಳೂರು ಬಾರ್ನಲ್ಲಿ ಕೆಲಸಕ್ಕೆ ಹೋಗಿದ್ದ ಬಳಿಕ 2-10-2013 ರಂದು ವಾಪಸ್ ಮನೆಗೆ ಬಂದು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ. ಈತ ಪದೇ ಪದೇ ಮನೆಯಿಂದ ಹೋಗುತ್ತಿದ್ದ ಕಾರಣ ವಾಪಸ್ ಬರುತ್ತಾನೆಂದು ನಾಪತ್ತೆ ಪ್ರಕರಣ ಕುಟುಂಬದವರು ನೀಡಿರಲಿಲ್ಲ ಎನ್ನಲಾಗಿದೆ.
ಕೋಲಾರ ಜಿಲ್ಲೆಯ ಕೃಷ್ಣಪ್ಪ (85) ವಯಸ್ಸಿನ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದು 22-10-2024 ರಂದು ಏಕಾಏಕಿ ಮನೆಯಿಂದ ಹೊರ ಹೋದವರು ವಾಪಸ್ ಮನೆಗೆ ಬಾರದೆ ಇದ್ದ ಕಾರಣ ಕುಟುಂಬದವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಅಸ್ಥಿಪಂಜರ ಕುಟುಂಬಕ್ಕೆ ಪಡೆಯಲು ಅವಕಾಶ: ಡಿಎನ್ಎ ವರದಿ ಪ್ರಕಾರ ಮೂರು ಕುಟುಂಬದವರು ಎಸ್ಐಟಿಗೆ ಮನವಿ ಮಾಡಿದರೆ ಕುಟುಂಬಕ್ಕೆ ಅಸ್ಥಿಪಂಜರ ಪಡೆಯಲು ಅವಕಾಶವಿದೆ. ಎಸ್ಐಟಿ ಅಧಿಕಾರಿಗಳು ಜು.15 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಮೂವರ ಡಿಎನ್ಎ ಮೂಲಕ ದೃಢಪಟ್ಟ ಬಗ್ಗೆ ವರದಿ ನೀಡಿದ್ದಾರೆ. ಹೀಗೆ ಮೂವರ ನಾಪತ್ತೆ ಪ್ರಕರಣಗಳ ಹಿನ್ನೆಲೆ ಇದೀಗ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಡಿಎನ್‌ಎ ಜತೆ ಹೊಂದಾಣಿಕೆಯಾಗಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
Discover more from Coastal Times Kannada
Subscribe to get the latest posts sent to your email.







Discussion about this post