ಮಂಗಳೂರು: ‘ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ. ಅದಕ್ಕಾಗಿ ಸಮಗ್ರವಾಗಿರುವ ಹೊಸ ಶಿಕ್ಷಣ ನೀತಿಯು ಬದಲಾದ ಸಮಯಕ್ಕೆ ಸೂಕ್ತವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಆಶ್ವತ್ಥ ನಾರಾಯಣ ಹೇಳಿದರು.
ಉನ್ನತ ಶಿಕ್ಷಣ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಜಂಟಿಯಾಗಿ ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಕೊಡಬೇಕಾದ ಆದ್ಯತೆ ಸಿಗದೇ ಇರುವುದರಿಂದ ಜಾಗತಿಕವಾಗಿ ನಾವು ಹಿಂದುಳಿಯುವಂತಾಗಿದೆ. ಸೂಕ್ತಕಾಲದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳದೇ ಇರುವುದರಿಂದ ಸಮಾಜಕ್ಕೆ ನಷ್ಟವಾಗಿದೆ ಎಂದರು.
34 ವರ್ಷಗಳ ನಂತರ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ. 3 ಲಕ್ಷಕ್ಕಿಂತ ಹೆಚ್ಚು ಸಲಹೆ ಸ್ವೀಕರಿಸಿ, ಈ ನೀತಿಯನ್ನು ಜಾರಿಗೊಳಿಸಲಾಗಿದೆ. ಒಂದು ವರ್ಷದ ನಂತರ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶಿಕ್ಷಣ ನೀತಿ ಅನುಷ್ಠಾನಕ್ಕೆ ಡಿಸೆಂಬರ್ ನಲ್ಲಿ ಸಚಿವ ಸಂಪುಟದ ಒಪ್ಪಿಗೆ ನೀಡಲಾಯಿತು. ಅನುಷ್ಠಾನ, ಜಾಗೃತಿ, ಸಹಾಯವಾಣಿ ಸೇರಿದಂತೆ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.
10 ಸಾವಿರ ಪ್ರಾಧ್ಯಾಪಕರಿಗೆ ವರ್ಷದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಕಲಿಕೆ, ಮೌಲ್ಯಮಾಪನ, ಪಠ್ಯಕ್ರಮ ಬಹಳಷ್ಟು ಸುಧಾರಣೆ ಆಗಬೇಕು. ಸಮಾಜದ ಸಂಪನ್ಮೂಲವನ್ನು ಇದಕ್ಕೆ ವಿನಿಯೋಗಿಸಬೇಕು. ಅಂದಾಗ 10 ಪಟ್ಟು ಸಮಾಜಕ್ಕೆ ತಿರುಗಿ ಬರುತ್ತದೆ ಎಂದರು.
ಮಕ್ಕಳನ್ನು ಆಟದ ಮೈದಾನದಲ್ಲಿ ನೋಡಲು ಸಿಗುತ್ತಿಲ್ಲ. ಸಾಮಾಜಿಕ ಹಾಗೂ ಮಾನಸಿಕ, ದೈಹಿಕ ಸಾಮರ್ಥ್ಯ ಇರುವುದಿಲ್ಲ. ಪರಿಪೂರ್ಣ ವ್ಯಕ್ತಿತ್ವಇಲ್ಲದ ವ್ಯಕ್ತಿಗಳನ್ನು ಬೆಳೆಸುವುದರಿಂದ ಏನೂ ಸಾಧನೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸೆಮಿಸ್ಟರ್ ನಲ್ಲಿ ಮಾತ್ರ ಮೌಲ್ಯಮಾಪನ ನಡೆಯುತ್ತಿತ್ತು. ಈಗ ಪ್ರತಿ ತರಗತಿಯಲ್ಲೂ, ಪ್ರತಿ ವಿದ್ಯಾರ್ಥಿಯ ಮೌಲ್ಯಮಾಪನ ಮಾಡುವ ಮೂಲಕ ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿ ಕೇಂದ್ರಿತ ಹೊಸ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ, ಆಡಳಿತದಲ್ಲಿ ಸುಧಾರಣೆ ಆಗಲಿದೆ ಎಂದರು.