ಮಂಗಳೂರು: ಸುಮಾರು ಮೂರೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉರ್ವ ಮಾರ್ಕೆಟ್‌ನ ಕಬಡ್ಡಿ ಮತ್ತು ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್‌ಗಳ ರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಚಾಲನೆ ಲಭಿಸಿದೆ.
ಮಂಗಳೂರು ಸ್ಮಾರ್ಟ್ ಸಿಟಿ ಲಿ. ನಿಂದ 18.81 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಗಸ್ಟ್ 13ರಂದು ಕಾರ್ಯಾದೇಶ ನೀಡಿದ್ದು, ಇದೀಗ ಪಿಲ್ಲರ್ ಹಾಕಲು ನೆಲ ಗುಂಡಿ ಮಾಡುವ ಕಾಮಗಾರಿ ಭರದಿಂದ ಸಾಗುತ್ತಿದೆ. ಮೆಸರ್ಸ್ ಮುಗರೋಡಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದ್ದು, ಕಾರ್ಯಾದೇಶ ಪಡೆದ 24 ತಿಂಗಳಲ್ಲಿ ಅಂದರೆ 2023ರ ಆಗಸ್ಟ್‌ಗೆ ಕಾಮಗಾರಿ ಮುಗಿಸಬೇಕಿದೆ.
ಒಟ್ಟು 15 ಮೀ. ಎತ್ತರದ ಪ್ರಸ್ತಾವಿತ ಒಳಾಂಗಣ ಕ್ರೀಡಾಂಗಣ ಕಟ್ಟಡದಲ್ಲಿ ಬ್ಯಾಡ್ಮಿಂಟನ್ ಮತ್ತು ಕಬಡ್ಡಿಗೆ 9 ಮೀ. ಎತ್ತರಕ್ಕೆ ಶ್ರೀನಿವಾಸ ಮಲ್ಯ ಸ್ಟೇಡಿಯಂ ಮಾದರಿಯಲ್ಲಿ ಇಂಟರ್ ಚೇಂಜೇಬಲ್ ಕೋರ್ಟ್ ನಿರ್ಮಿಸಲಾಗುತ್ತದೆ. ಇದನ್ನು ಕಬಡ್ಡಿ ಮತ್ತು ಶಟ್ಲ್ ಬ್ಯಾಡ್ಮಿಂಟನ್‌ಗೆ ಬೇಕಾದ ಸಂದರ್ಭ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಕಬಡ್ಡಿಗೆ-3 ಮತ್ತು ಬ್ಯಾಡ್ಮಿಂಟನ್‌ಗೆ -5 ಕೋರ್ಟ್ ನಿರ್ಮಿಸಲಾಗುತ್ತದೆ. ಒಂದು ಕಡೆ 400ರಂತೆ ಒಟ್ಟು 800 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಪಕ್ಕದಲ್ಲಿ ಎರಡೂ ಕಡೆ ನಾಲ್ಕು ಅಂತಸ್ತು ಇರಲಿದ್ದು, ಅದರಲ್ಲಿ ಕ್ಲಾಕ್ ರೂಮ್, ಹಿರಿಯರು – ಮಕ್ಕಳಿಗೆ ಚೇಂಜಿಂಗ್ ರೂಮ್‌ಗಳು, ಲಾಕರ್ ರೂಮ್ಸ್ ಮತ್ತು ಶೌಚಾಲಯಗಳು ನಿರ್ಮಾಣಗೊಳ್ಳಲಿವೆ.