ಬೆಂಗಳೂರು: ಕನ್ನಡದ ಖ್ಯಾತ ಪ್ರತಿಭಾವಂತ ನಟ ಡಾ. ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ (46) ಹೃದಯಾಘಾತದಿಂದ ಇಂದು ಮಧ್ಯಾಹ್ನ ನಗರದ ವಿಕ್ರಂ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು, ಅಸಂಖ್ಯಾತ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಇಂದು ನಸುಕಿನ ಜಾವ ಎಂದಿನಂತೆ ಜಿಮ್ ನಲ್ಲಿ ದೇಹ ಕಸರತ್ತು ನಡೆಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಯಿತು. ಆಗ ಆಸ್ಪತ್ರೆಯಲ್ಲಿ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಪುನೀತ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅಸುನೀಗಿದ್ದು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆಘಾತವಾಗಿದೆ. ಪುನೀತ್ ಅವರ ನಿಧನ ಸುದ್ದಿ ಕೇಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಚಿತ್ರರಂಗದ ಗಣ್ಯರು, ಅಸಂಖ್ಯಾತ ಅಭಿಮಾನಿಗಳು ಆಸ್ಪತ್ರೆಯತ್ತ ದೌಡಾಯಿಸಿದರು.
ಪುನೀತ್ ನಿವಾಸಕ್ಕೆ ಬಿಗಿ ಭದ್ರತೆ: ಪುನೀತ್ ರಾಜ್ ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ತಂಡೋಪತಂಡವಾಗಿ ಮನೆಯತ್ತ ಲಗ್ಗೆಯಿಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪುನೀತ್ ಮನೆಗೆ ತೆರಳುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.
ನಟ ಪುನೀತ್ ರಾಜ್ ಕುಮಾರ್ ಅವರು ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಬಂದಿದ್ದಾರೆ, ಇಂದು ಬೆಳಗ್ಗೆ 11.30ರ ಹೊತ್ತಿಗೆ ಅವರು ಆಸ್ಪತ್ರೆಗೆ ಬರುವಾಗಲೇ ಗಂಭೀರವಾಗಿದ್ದರು. ಅದಕ್ಕೆ ಮೊದಲು ಎದೆನೋವು ಕಾಣಿಸಿಕೊಂಡು ಬೇರೆ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಂಡು ಇಲ್ಲಿಗೆ ಬಂದರು. ಐಸಿಯುನಲ್ಲಿ ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಮ್ಮಿಂದ ಬದುಕಿಸಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ತಜ್ಞ ಡಾ ರಂಗನಾಥ್ ನಾಯಕ್ ತಿಳಿಸಿದ್ದಾರೆ.
ಇಂದು ನಸುಕಿನ ಜಾವ ಜಿಮ್ ಗೆ ವರ್ಕೌಟ್ ಗೆ ಹೋಗಿದ್ದಾಗಲೇ ಪುನೀತ್ ಅವರಿಗೆ ತೀವ್ರ ಹೃದಯಾಘಾತವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post