ಮುಂಬೈ, ಅ.28: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಜಾಮೀನು ಲಭಿಸಿದೆ. ಬಾಂಬೆ ಹೈಕೋರ್ಟ್ ಸುದೀರ್ಘ ವಿಚಾರಣೆಯ ಬಳಿಕ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಗೆ ಒಪ್ಪಿಗೆ ನೀಡಿದೆ.
ಡ್ರಗ್ಸ್ ಕೇಸ್ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರ್ಯನ್ ಖಾನ್‌ಗೆ ಅಂತೂ ಜಾಮೀನು ಸಿಕ್ಕಿದೆ. ಕಳೆದ ಮೂರು ದಿನಗಳಿಂದ ಮುಂಬೈ ಹೈಕೋರ್ಟ್‌ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಏನೂ ಸಾಕ್ಷಿ ಇಲ್ಲದೆ ಆರ್ಯನ್ ಖಾನ್‌ರನ್ನು ಯಾಕೆ ಬಂಧಿಸಿದ್ದೀರಿ ಎಂದು ಆರ್ಯನ್ ಪರ ವಕೀಲರು ಪ್ರಶ್ನೆ ಮಾಡಿದ್ದರು.
18 ಜನರನ್ನು ಬಂಧಿಸಲಾಗಿತ್ತು, ಈಗ ಮೂವರಿಗೆ ಜಾಮೀನು ಅರ್ಜಿ ಮಂಜೂರು :
ಮೂರು ವಾರಗಳಿಗೂ ಅಧಿಕ ಕಾಲ ಆರ್ಯನ್ ಅವರು ಜೈಲಿನಲ್ಲಿದ್ದರು. ಈ ಹಿಂದೆ ಎರಡು ಬಾರಿ ಆರ್ಯನ್‌ಗೆ ಜಾಮೀನು ನೀಡಲು ತಿರಸ್ಕಾರ ಮಾಡಲಾಗಿತ್ತು. ಈ ಹಿಂದೆ ವಿಶೇಷ ಆಂಟಿ ಡ್ರಗ್ಸ್ ಕೋರ್ಟ್ ಆರ್ಯನ್‌ಗೆ ಜಾಮೀನು ನೀಡಲು ಹಿಂದೇಟು ಹಾಕಿತ್ತು. ಅರ್ಬಾಜ್ ಮರ್ಚೆಂಟ್ ಶೂನಲ್ಲಿ ಡ್ರಗ್ಸ್ ಇರೋದು ಆರ್ಯನ್‌ಗೆ ಗೊತ್ತಿತ್ತು ಎಂದು ಆಗ ಹೇಳಲಾಗಿತ್ತು. ಒಟ್ಟು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 18 ಜನರನ್ನು ಬಂಧಿಸಲಾಗಿತ್ತು.
ನಾಳೆ ಜೈಲಿನಿಂದ ಹೊರಬರಲಿರುವ ಆರ್ಯನ್ ಖಾನ್ :
ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೇಚಾ ಅವರಿಗೂ ಜಾಮೀನು ಸಿಕ್ಕಿದೆ. ನ್ಯಾಯಾಧೀಶರು ವಿವರವಾದ ಜಾಮೀನು ಆದೇಶವನ್ನು ನಾಳೆ ನೀಡಲಿದ್ದಾರೆ. ಆದ್ದರಿಂದ ಆರ್ಯನ್ ಖಾನ್ ಇಂದು ಜೈಲಿನಿಂದ ಹೊರಬರೋದಿಲ್ಲ. ಎನ್‌ಸಿಬಿ ಮಾತ್ರ ಆರ್ಯನ್ ಖಾನ್‌ಗೆ ಜಾಮೀನು ನೀಡುವುದನ್ನು ವಿರೋಧಿಸಿತ್ತು. 23 ವರ್ಷದ ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವನೆ ಮಾಡಿಲ್ಲ, ಜೊತೆಗೆ ಸಾಗಾಣಿಕೆಯಲ್ಲಿಯೂ ಭಾಗಿಯಾಗಿದ್ದಾರೆ, ನಿಷಿದ್ಧ ವಸ್ತುಗಳ ಸ್ವಾಧೀನ ಹೊಂದಿದ್ದಾರೆ ಎಂದು ಎನ್‌ಸಿಬಿ ಆರೋಪ ಮಾಡಿತ್ತು.