ಉಳ್ಳಾಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 1 ವಾರ ಆಯೋಜಿಸಿರುವ “ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ಉಳ್ಳಾಲ ನಗರ ಸಭೆಯಲ್ಲಿ ಸರ್ಕಾರಿ ಸಿಬ್ಬಂದಿ ಮತ್ತು ಪೌರಯುಕ್ತ ರಾಯಪ್ಪನವರ ನೇತೃತ್ವದಲ್ಲಿ ಕನ್ನಡ ಗೀತಗಾಯನ ಹಾಡಿದರು.
ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಿದರು. ಇದೇ ರೀತಿ ರಾಜ್ಯಾದ್ಯಂತ ಗೀತಗಾಯನ ನಡೆಯಿತು. ಗಾಯನದ ನಂತರ ಕಾರ್ಯಕ್ರಮದಲ್ಲಿ “ಕನ್ನಡದಲ್ಲೇ ಮಾತನಾಡುವ, ಬರೆಯುವ…” ಸಂಕಲ್ಪ ಸ್ವೀಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಿರುವ ಏಕಕಾಲ ಗೀತ ಗಾಯನ ಕಾರ್ಯಕ್ರಮ ರಾಜ್ಯದಲ್ಲಿ ಒಂದು ವಾರ ಕಾಲ ನಡೆಯಲಿದೆ. ಮೂರು ಕನ್ನಡ ಗೀತೆಗಳನ್ನು ಹಾಡಿಸುವ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊತ್ತಿಕೊಂಡಿದೆ.