ಬೆಂಗಳೂರು: ಪುನೀತ್ ಅವರ ಅಂತಿಮ ಸಂಸ್ಕಾರವನ್ನು ನಾಳೆ (ಭಾನುವಾರ) ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ಪುತ್ರಿ ಬೆಂಗಳೂರಿಗೆ ಬರುವುದು ಸಂಜೆ 6 ಆಗಲಿದೆ. ಸಂಜೆಯ ನಂತರ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗಬಹುದು. ಅಲ್ಲದೇ, ಅವರ ಅಭಿಮಾನಿಗಳು ಇನ್ನೂ ಬಹಳಷ್ಟು ಸಂಖ್ಯೆಯಲ್ಲಿ ಬರುವವರಿದ್ದಾರೆ. ಹೀಗಾಗಿ ರಾಜಕುಮಾರ್ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ನಾಳೆಗೆ ಅಂತ್ಯಕ್ರಿಯೆ ನಿಗದಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಆಗಮಿಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿರುವ ನಗರದ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಅವರ ಮಗಳು ಬಂದ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಕುಟುಂಬದವರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಇದನ್ನು ಸುಗಮವಾಗಿ ನಡೆಸಲು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಯವರು ಕ್ರಮ ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪುನೀತ್ ರಾಜ್‌ಕುಮಾರ್ ಜನಪ್ರಿಯ ನಟ. ಅವರ ಅಗಲಿಕೆ ನಮಗೆಲ್ಲರಿಗೂ ದುಃಖ ತಂದಿದೆ. ಅವರನ್ನು ಗೌರವದಿಂದ ಶಾಂತಿಯುತವಾಗಿ ನಾವು ಬೀಳ್ಕೊಡಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಈ ಸಮಯ- ಈ ಸಂದರ್ಭದಲ್ಲಿ ನಾವು ಸಂಯಮ, ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಜನರು ಈ ವರೆಗೆ ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ನಮ್ಮ ಜವಾಬ್ದಾರಿಯುತ ನಡವಳಿಕೆ ಡಾ. ರಾಜ್ ಕುಮಾರ್ ಹಾಗೂ ಪುನೀತ್ ಅವರಿಗೆ ಗೌರವ ಸಲ್ಲಿಸಿದಂತೆ. ಶಾಂತಿ, ಸ್ನೇಹದಿಂದ ಇರುವುದು ಕನ್ನಡಿಗರ ಸಂಸ್ಕೃತಿ. ಇದನ್ನು ನಾವು ಇಂದು ಮೆರೆಯಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅಂತಿಮ ಯಾತ್ರೆಗೆ ಮಾರ್ಗ ನಿಗದಿ :
ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಮಾರ್ಗ ನಿಗದಿ ಮಾಡಲಾಗಿದೆ.
ಕಂಠೀರವ ಸ್ಟುಡಿಯೊದಲ್ಲಿರುವ ಡಾ. ರಾಜ್‌ಕುಮಾರ್ ಸಮಾಧಿ ಬಳಿಯೇ ಅಂತ್ಯಕ್ರಿಯೆ ನಡೆಯಲಿದೆ. ಕಂಠೀರವ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದೆ.
ಕಾರ್ಪೊರೇಷನ್ ವೃತ್ತ, ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ), ವಿಂಡ್ಸರ್ ಮ್ಯಾನರ್, ಸ್ಯಾಂಕಿ ಕೆರೆ, ಸರ್ಕಲ್ ಮಾರಮ್ಮ ದೇವಸ್ಥಾನ, ಯಶವಂತಪುರ, ಗೊರಗುಂಟೆಪಾಳ್ಯದ ಮೂಲಕ ಮೆರವಣಿಗೆ ಹೋಗಲಿದೆ.
ಮೆರವಣಿಗೆಯುದ್ದಕ್ಕೂ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post