ಬೆಂಗಳೂರು: ‘ಬಿಟ್ ಕಾಯಿನ್’ ಹಗರಣದ ಮೂಲ ಸೂತ್ರದಾರ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ರಾಜ್ಯ ಸರ್ಕಾರದ ಜಾಲತಾಣವನ್ನೇ ಹ್ಯಾಕ್ ಮಾಡಿ ₹ 46 ಕೋಟಿ ದೋಚಿದ್ದನೆಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣ ದಲ್ಲಿ ಶ್ರೀಕೃಷ್ಣನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ಹಿನ್ನೆಲೆ ಕೇಳಿ ದಂಗಾಗಿದ್ದರು. ‘ಅಂತರರಾಷ್ಟ್ರೀಯ ಹ್ಯಾಕರ್’ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ, ಹೊಸ ಆಯಾಮದಲ್ಲೇ ತನಿಖೆ ಮುಂದುವರಿಸಿದ್ದರು.
‘ಬಿಟ್ ಕಾಯಿನ್’ ಅಕ್ರಮದಲ್ಲಿ ಶ್ರೀಕಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆ ಠಾಣೆಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿತ್ತು. ಇದರ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಹಲವು ಹ್ಯಾಂಕಿಂಗ್ ಪ್ರಕರಣಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್ (https://eproc.karnataka.gov.in) ಜಾಲತಾಣ ಹ್ಯಾಕ್ ಬಗ್ಗೆಯೂ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
‘ನೆದರ್ಲೆಂಡ್ಸ್‌ನಲ್ಲಿ ಬಿ.ಎಸ್ಸಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಶ್ರೀಕೃಷ್ಣ, ಸ್ಥಳೀಯ ಸ್ನೇಹಿತರ ಜೊತೆ ಹೆಚ್ಚು ಓಡಾಡುತ್ತಿದ್ದ. ಆತನಿಗೆ ಸುನೀಶ್ ಹೆಗ್ಡೆ, ಹೇಮಂತ್ ಮದ್ದಪ್ಪ ಹಾಗೂ ಇತರರ ಪರಿಚಯವಾಗಿತ್ತು. ಅವರ ಜೊತೆ ಸೇರಿಕೊಂಡು ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್ ಜಾಲತಾಣವನ್ನು ಮೂರು ಬಾರಿ (2019ರ ಮೇ ಹಾಗೂ ಜೂನ್‌ನ) ಶ್ರೀಕೃಷ್ಣ ಹ್ಯಾಕ್ ಮಾಡಿದ್ದ. ಒಂದು ಪ್ರಯತ್ನ ವಿಫಲವಾಗಿತ್ತು. ಎರಡು ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.
‘ಉತ್ತರಾಖಂಡದ ಹಿಮಾಲಯಸ್ ಆನಂದ ಸ್ಪಾ ಆ್ಯಂಡ್ ರೆಸಾರ್ಟ್‌ನಲ್ಲಿ ಇದ್ದುಕೊಂಡು ಆರೋಪಿ ಈ ಕೃತ್ಯ ಎಸಗಿದ್ದ. ಟೆಂಡರ್‌ಗೆ ಬಿಡ್ ಮಾಡಿದ್ದ ಗುತ್ತಿಗೆದಾರರ ವೈಯಕ್ತಿಕ ಮಾಹಿತಿ ಹಾಗೂ ಅವರು ಬ್ಯಾಂಕ್‌ಗೆ ಪಾವತಿಸಿದ್ದ ಹಣದ ಮಾಹಿತಿಯನ್ನು ಶ್ರೀಕೃಷ್ಣ ಕದ್ದಿದ್ದ. ಇದಕ್ಕಾಗಿ ಆರೋಪಿ, ‘ಎಸ್‌ಕ್ಯೂಎಲ್ ಮ್ಯಾಪ್’ ತಂತ್ರಜ್ಞಾನ ಬಳಸಿದ್ದ.’
‘ಜಾಲತಾಣದ ದತ್ತಾಂಶ ಬಳಸಿಕೊಂಡು, ಆರೋಪಿ ಹೇಮಂತ್ ಮುದ್ದಪ್ಪ ನೀಡಿದ್ದ ಎರಡು ಖಾತೆಗಳಿಗೆ ಪ್ರತ್ಯೇಕವಾಗಿ ₹ 18 ಕೋಟಿ ಹಾಗೂ ₹ 28 ಕೋಟಿಯನ್ನು ಆರೋಪಿ ವರ್ಗಾವಣೆ ಮಾಡಿದ್ದ. ಅದರಲ್ಲಿ ₹ 2 ಕೋಟಿಯನ್ನು ಅಯೂಬ್ ಎಂಬಾತ ಪಡೆದಿದ್ದ. ಆದರೆ, ಆತ ಯಾರು ಎಂಬುದನ್ನು ಶ್ರೀಕೃಷ್ಣ ಬಾಯ್ಬಿಟ್ಟಿಲ್ಲ’ ಎಂಬ ಸಂಗತಿಯೂ ಆರೋಪ ಪಟ್ಟಿಯಲ್ಲಿದೆ.
‘ಜಾಲತಾಣ ಹ್ಯಾಕ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಇ–ಸಂಗ್ರಹಣಾ ಪೋರ್ಟಲ್ ಘಟಕದ ಆರ್ಥಿಕ ಸಲಹೆಗಾರ್ತಿ ಎಸ್.ಕೆ. ಶೈಲಜಾ, ಸಿಐಡಿಯ ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು. ಅಕ್ರಮ ವರ್ಗಾವಣೆಯಿಂದ ಸರ್ಕಾರಕ್ಕೆ ₹ 1.05 ಕೋಟಿ ನಷ್ಟವಾಗಿರುವುದಾಗಿ ತಿಳಿಸಿದ್ದರು. ತನಿಖೆ ಕೈಗೊಂಡಾಗಲೇ, ₹ 46 ಕೋಟಿ ಅಕ್ರಮ ವರ್ಗಾವಣೆ ಆಗಿರುವುದಾಗಿ ಗೊತ್ತಾಗಿದೆ. ಇದೇ ಹಣ, ಬಿಟ್ ಕಾಯಿನ್ ಆಗಿ ಪರಿವರ್ತನೆ ಆಗಿರುವ ಅನುಮಾನ ಇದೆ. ಆರೋಪಿ ಸಹ ತನ್ನ ಹೇಳಿಕೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾನೆ’ ಎಂಬ ಮಾಹಿತಿಯೂ ದೋಷಾರೋಪ ಪಟ್ಟಿಯಲ್ಲಿದೆ.
ಇ–ಸಂಗ್ರಹಣಾ ಪೋರ್ಟಲ್ ಜಾಲತಾಣ ಹ್ಯಾಕ್ ಪ್ರಕರಣದ ತನಿಖೆಯನ್ನು ಸದ್ಯ ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ವಿಚಾರಣೆ ಸಹ ನಡೆಸಿದ್ದಾರೆ ಎಂಬ ಮಾಹಿತಿಯನ್ನೂ ಸಿಸಿಬಿ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.