ಕೊಣಾಜೆ,ಹರೇಕಳ ಅ.31: ಸಿಡಿಲು ಬರುತ್ತಿದ್ದಾಗ ಗದ್ದೆಯಿಂದ ಹಸುವನ್ನು ಕೊಟ್ಟಿಗೆಗೆ ಕರೆದೊಯ್ಯುತ್ತಿರುವ ವೇಳೆ ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಹರೇಕಳ ಗಾನದಬೆಟ್ಟು ಎಂಬಲ್ಲಿಯ ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹಿಮಾನ್ (33) ಎಂದು ಗುರುತಿಸಲಾಗಿದೆ. ಹರೇಕಳ ಕೊಣಾಜೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆಯಿಂದ ಸಿಡಿಲು ಮಿಂಚು ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಸುಮಾರು 6.30 ರ ವೇಳೆಗೆ ಗದ್ದೆಯಲ್ಲಿ ಕಟ್ಟಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ರಹಿಮಾನ್ ಮೇಲೆ ಸಿಡಿಲು ಬಡಿದಿದೆ. ಸ್ಥಳದಲ್ಲೇ ಕುಸಿದು ಬಿದ್ದ ರಹಿಮಾನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತ ರಹಿಮಾನ್ ಅವರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನ ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್, ರೆವಿನ್ಯೂ ಇನ್ಸ್ಪೆಕ್ಟರ್ ಪ್ರಸಾದ್, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.