ಉಳ್ಳಾಲ: ‘ಕೇರಳದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಗಡಿಭಾಗದ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಕೋವಿಡ್–19 ತಪಾಸಣಾ ಕಾರ್ಯಗಳ ಪ್ರಕ್ರಿಯೆಗಳನ್ನು ಪರಿಶೀಲಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ಈಗಾಗಲೇ ಲಸಿಕೆ ಪಡೆದವರಿಗೆ ಮತ್ತು ನೆಗೆಟಿವ್ ವರದಿ ಇರುವವರಿಗೆ ಜಿಲ್ಲೆಯ ಪ್ರವೇಶಕ್ಕೆ ಅವಕಾಶವಿದೆ. ಈ ಮಾರ್ಗಸೂಚಿಯನ್ನು ಇನ್ನಷ್ಟು ಕಟ್ಟುನಿಟ್ಟು ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕೆಲವೊಂದು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಮಾರ್ಗದರ್ಶನದಂತೆ ಇನ್ನೆರಡು ದಿನಗಳಲ್ಲಿ ಕೋವಿಡ್‌ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಜಿಲ್ಲಾಡಳಿತ ರೂಪಿಸಲಿದೆ’ ಎಂದು ತಿಳಿಸಿದರು.
‘ಶನಿವಾರ ಜಿಲ್ಲಾ ವಿಪತ್ತು ಪ್ರಾಧಿಕಾರದ ಸಭೆ ನಡೆಯಲಿದೆ. ಈ ವೇಳೆಯೂ ಹೆಚ್ಚಿನ ನಿಯಮ ಜಾರಿಗೊಳಿಸುವ ಚರ್ಚೆ ನಡೆಯಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಬಹಳಷ್ಟು ಜನರ ಬರುವಿಕೆ, ಕಾರ್ಯಕ್ರಮಗಳಲ್ಲಿ ನಿಯಂತ್ರಣ, ಅಂತರ್‌ರಾಜ್ಯ ಬಸ್‌ಗಳ ಸಂಚಾರ, ಬೇರೆ ರಾಜ್ಯದಿಂದ ಬರುವ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚುವರಿ ನಿಯಮಗಳನ್ನು ಹಾಕುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜತಗೆ ಚರ್ಚಿಸಲಿದ್ದೇವೆ’ ಎಂದು ತಿಳಿಸಿದರು.
ಕಾಸರಗೋಡಿನಲ್ಲಿ ಶೇ.14 ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದ್ದು, ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವವರಿಂದಲೇ ಈ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗುತ್ತಿದೆ ಎಂಬ ಸಂಶಯ ಉಂಟಾಗಿದೆ. ಆದ್ದರಿಂದ ಜಿಲ್ಲೆಯ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆಯ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ ಎಂದರು. ಕಾಲೇಜುಗಳಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದೂ, ಕೋವಿಡ್ ನಿಯಮಗಳನ್ನು ಚಾಚುತಪ್ಪದೇ ಪಾಲಿಸುವುದರೊಂದಿಗೆ ಕೋವಿಡ್ ಸೋಂಕು ಹರಡದಂತೆ ನಿಗಾವಹಿಸಬೇಕು ಎಂದರು. ಜಿಲ್ಲೆಯಲ್ಲಿ ಪ್ರತಿದಿನ 7000 ರಿಂದ 9000 ದವರೆಗೆ ಕೋವಿಡ್ ತಪಾಸಣೆ ಮಾಡುವ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ‘ಜಿಲ್ಲೆಯಾದ್ಯಂತ ಆರು ಚೆಕ್ ಪೋಸ್ಟ್‌ಗಳು 24 ಗಂಟೆಗಳ ಕಾಲ ಕಾರ್ಯಾಚರಿಸುತ್ತಿದೆ. ತಲಪಾಡಿ ಪ್ರಮುಖ ಚೆಕ್‍ಪೋಸ್ಟ್ ಆಗಿರುವುದರಿಂದ ಹೆಚ್ಚುವರಿ ಪೊಲೀಸರು, ಆರೋಗ್ಯ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೈಲ್ವೆ ನಿಲ್ದಾಣ, ಒಳ ರಸ್ತೆಗಳಲ್ಲಿಯೂ ಚೆಕ್ ಪಾಯಿಂಟ್ ಆರಂಭಿಸಲಾಗಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗಿರುವುದರಿಂದ ಹಿರಿಯ ಅಧಿಕಾರಿಗಳ ಆದೇಶದಂತೆ ಪ್ರತ್ಯೇಕ ಮಾರ್ಗಸೂಚಿಗಳ ಜಾರಿ ಶೀಘ್ರದಲ್ಲೇ ಆಗಲಿದೆ. ಮತ್ತೆ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಾರದಂತೆ ಜನರೇ ಜಾಗೃತರಾಗಿರಬೇಕಿದೆ’ ಎಂದರು.
ತಲಪಾಡಿ ಒಳ ರಸ್ತೆ ದೇವಿನಗರಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಶುಕ್ರವಾರದಿಂದಲೇ 24 ಗಂಟೆಯ ಕಾಲ ಚೆಕ್ ಪೋಸ್ಟ್ ಆರಂಭಿಸಲು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಡಿಸಿಪಿ ಹರಿರಾಂ ಶಂಕರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ತಹಶೀಲ್ದಾರ್ ಗುರುಪ್ರಸಾದ್, ಟಿಎಚ್‍ಒ ಡಾ.ಸುಜಯ್ ಭಂಡಾರಿ, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post