ಹಾಸನ: ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿತರಾಗಿದ್ದ ವಿಕ್ರಂ ಸಿಂಹ ಅವರಿಗೆ ಬೇಲೂರಿನ ಹಿರಿಯ ಸಿವಿಲ್ ನ್ಯಾಯಾಲಯ ಭಾನುವಾರ ಜಾಮೀನು ನೀಡಿ ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ಆದೇಶ ಹೊರಡಿಸಿದೆ. ವಿಕ್ರಂ ಪರ ವಕೀಲ ಚಂದ್ರೇಗೌಡ, ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಹಾಸನ ಜಡ್ಜ್ ಮನೆಯಿಂದ ವಕೀಲರ ಜೊತೆ ವಿಕ್ರಂ ಸಿಂಹ ಹೊರಬಂದಿದ್ದಾರೆ.
ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಬಳಿ 126ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಪ್ರಕರಣದಲ್ಲಿ ನಿನ್ನೆ ಬಂಧಿಸಲಾಗಿತ್ತು. ವಿಕ್ರಂ ಸಿಂಹರನ್ನು ಇಂದು ಜಡ್ಜ್ ಮುಂದೆ ಅರಣ್ಯಾಧಿಕಾರಿಗಳು ಹಾಜರುಪಡಿಸಿದ್ದರು. ಪ್ರಕರಣ ಸಬಂಧ ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಬೇಲೂರು ತಹಶೀಲ್ದಾರ್ ಮಮತಾ ನೀಡಿದ್ದ ದೂರು ಆಧರಿಸಿ FIR ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪ ಹಿನ್ನೆಲೆ ವಿಕ್ರಂ ಸಿಂಹರನ್ನು ಅರೆಸ್ಟ್ ಮಾಡಲಾಗಿತ್ತು.
ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಕ್ರಂ ಸಿಂಹ, ‘ತುಂಬಾ ವಿಷಯಗಳಿವೆ. ಕಾಲ ಬರಲಿ, ಎಲ್ಲವನ್ನೂ ಹೇಳುತ್ತೇನೆ. ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಯಾರ ಕೈವಾಡ ಇದೆ ಎನ್ನುವುದನ್ನೂ ತಿಳಿಸುತ್ತೇನೆ. ಯಾರನ್ನು ನೀವು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರೋ ಅವರ ನಿಷ್ಠೆ ಯಾರಿಗೆ ಎನ್ನುವುದನ್ನೂ ಹೇಳುತ್ತೇನೆ’ ಎಂದು ಪರೋಕ್ಷವಾಗಿ ಬೇಲೂರು ತಹಶೀಲ್ದಾರ್ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.
‘ನಮ್ಮನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಅಣ್ಣನನ್ನು ಟಾರ್ಗೆಟ್ ಮಾಡಲಾಗಿದ್ದು, ಇದೆಲ್ಲ ವ್ಯವಸ್ಥಿತವಾಗಿ ನಡೆಯುತ್ತಿರುವ ಪಿತೂರಿ’ ಎಂದು ಹೇಳಿದರು.
ಕೂಡಲೇ ವಿಕ್ರಂ ಸಿಂಹ ಅವರನ್ನು ಘಟನಾ ಸ್ಥಳವಾದ ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಳ ಮಹಜರು ಮಾಡಿದ ಅರಣ್ಯಾಧಿಕಾರಿಗಳು, ಸಂಜೆಯ ವೇಳೆಗೆ ಬೇಲೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ್ ನಾಯ್ಕ್ ಅವರ ನಿವಾಸದಲ್ಲಿ ವಿಕ್ರಂ ಸಿಂಹ ಅವರನ್ನು ಹಾಜರುಪಡಿಸಿದರು.
ಇದೇ ವೇಳೆ ವಿಕ್ರಂ ಸಿಂಹ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ‘ಪ್ರಕರಣವು ಜಾಮೀನಿಗೆ ಅರ್ಹವಾಗಿದ್ದು, ಯಾವುದೇ ಷರತ್ತಿಲ್ಲದೇ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ’ ಎಂದು ವಿಕ್ರಂ ಸಿಂಹ ಪರ ವಕೀಲ ಚಂದ್ರೇಗೌಡ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post