ಬೆಂಗಳೂರು, ಜ 01: ಒಂದು ದಿನದ ಮಟ್ಟಿಗೆ ಮಾಲ್ ಅನ್ನು ಮುಚ್ಚಲಾಗುವುದು ಎಂಬ ಮಾಲ್ ಆಫ್ ಏಷ್ಯಾದ ಪರ ವಕೀಲರ ಭರವಸೆ ದಾಖಲಿಸಿಕೊಂಡ ಕರ್ನಾಟಕ ಹೈಕೋರ್ಟ್, ಮುಂದಿನ ವಿಚಾರಣೆವರೆಗೂ ಮಾಲ್ ವಿರುದ್ದ ಕ್ರಮಕ್ಕೆ ಮುಂದಾಗದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಡಿಸೆಂಬರ್ 31 ಮತ್ತು ಜನವರಿ 15ರ ನಡುವೆ ಮಾಲ್‌ಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಪ್ರಶ್ನಿಸಿ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಭಾನುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ಜೆ. ಎಸ್. ಕಮಲ್ ಅವರಿದ್ದ ವಿಶೇಷ ಪೀಠದ ಮುಂದೆ ಮಾಲ್ ಪರ ವಕೀಲರು ಮಾಹಿತಿ ನೀಡಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಲ್ ಆಡಳಿತವು ಮಾಲ್ ಒಂದು ದಿನದ ಮಟ್ಟಿಗೆ ಮುಚ್ಚಲಾಗುವುದು. ಜತೆಗೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದಲ್ಲಿ ತಿಳಿಸಿರುವ ಸಮಸ್ಯೆಗಳಿಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಾಲ್ ಪರ ವಕೀಲರು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಅಲ್ಲದೆ, ಸೌಹಾರ್ದಯುತವಾಗಿ ಪರಿಹರಿಸುವವರೆಗೆ ಅಥವಾ ನ್ಯಾಯಾಲಯದಿಂದ ಮುಂದಿನ ಆದೇಶವನ್ನು ನೀಡುವವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಪೀಠ ತಿಳಿಸಿದೆ. ಮಾಲ್ ಆಫ್ ಏಷ್ಯಾಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವುದನ್ನು ಅರ್ಜಿದಾರರು ವ್ಯವಹಾರ ನಡೆಸುವುದನ್ನು ಸಂಪೂರ್ಣವಾಗಿ ತಡೆಯುವ ಆದೇಶವಾಗಿದೆ ಎನ್ನಲಾಗುವುದಿಲ್ಲ. ಅರ್ಜಿದಾರರು ಮತ್ತು ಪ್ರತಿವಾದಿ ಪೊಲೀಸ್ ಆಯುಕ್ತರ ನಡುವಿನ ಚರ್ಚೆಯ ವಿಷಯವಾಗಿದೆ. ಇದು ಕೇವಲ ಆದೇಶದಿಂದ ಅನುಷ್ಠಾನ ಮಾಡುವಂತದ್ದಲ್ಲ ಎಂದು ಪೀಠ ತಿಳಿಸಿತು.
ಪ್ರಕರಣದ ಹಿನ್ನೆಲೆ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ಮಾಲ್ ಆಫ್ ಏಷ್ಯಾ ಅಕ್ಟೋಬರ್ 22, 2023ರಂದು ಸಾರ್ವಜನಿಕರಿಗೆ ತೆರೆಯಲಾಗಿದೆ. ಪಾರ್ಕಿಂಗ್ ಸೌಲಭ್ಯಗಳು, ಟ್ರಾಫಿಕ್ ನಿಯಂತ್ರಣ ಮತ್ತು ಇತರ ವಿಚಾರಗಳ ಬಗ್ಗೆ ಮಾಲ್ ಆಡಳಿತವು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಅಕ್ಟೋಬರ್ 11, 2023 ರಂದು ನೋಟಿಸ್ ನೀಡಿದ್ದರು.
ಇದಕ್ಕೆ ಅಕ್ಟೋಬರ್ 20ರಂದು ಪ್ರತಿಕ್ರಿಯಿಸದ್ದ ಮಾಲ್ ಅಗತ್ಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿತ್ತು. ಇದಾದ ಬಳಿಕ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಡಿಸೆಂಬರ್ 30ರಂದು ಹೊರಡಿಸಲಾಗಿತ್ತು. ವಾಹನ ದಟ್ಟಣೆ, ಸಂಚಾರ ಅಸ್ತವ್ಯಸ್ತವಾಗುವ ಹಿನ್ನೆಲೆಯಲ್ಲಿ 2023 ಡಿಸೆಂಬರ್ 31 ರಿಂದ 2024ರ ಜನವರಿ 15 ರ ವರೆಗೆ ಮಾಲ್‌ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವಂತೆ ನಿರ್ದೇಶಿಸಲಾಗಿತ್ತು.
ಅಲ್ಲದೆ, ಮಾಲ್ ಮಂಭಾಗದಲ್ಲೂ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 ರ ಅಡಿಯಲ್ಲಿ (ನಿಷೇಧಾಜ್ಞೆ) ಜಾರಿ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಮಾಲ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿದಾರರು ನ್ಯಾಯಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ತುರ್ತು ಮನವಿಯನ್ನು ಪರಿಗಣಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಲ್‌ಗೆ ನಿಷೇಧಾಜ್ಞೆ ಹೊರಡಿಸಿರುವ ಕ್ರಮ ಅನ್ಯಾಯದಿಂದ ಕೂಡಿದೆ. ಮಾಲ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಬೇಕು ಎಂದು ಹೇಳುವುದರಿಂದ ಆದೇಶವು ಅಸ್ಪಷ್ಟವಾಗಿದೆ. ಜನವರಿ 15ರವರೆಗೆ ಮಾಲ್ ಅನ್ನು ಮುಚ್ಚುವುದರಿಂದ ಪರಿಣಾಮವನ್ನು ಬೀರುತ್ತದೆ. ಸಮಸ್ಯೆ ಅಷ್ಟು ಗಂಭೀರವಾಗಿಲ್ಲ, ಅಂತಹ ಗಂಭೀರ ಕ್ರಮದ ಅಗತ್ಯವಿಲ್ಲ ಎಂದು ವಾದಿಸಿದ್ದರು.
ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಅದರ ತೀರ್ಮಾನವನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post