ವಿಟ್ಲ ಜ.7 : ತುಳುನಾಡಿನ ಜನರು ಆರಾಧಿಸುವ ಕೊರಗಜ್ಜನ ಮಾದರಿಯಲ್ಲಿ ವೇಷ ತೊಟ್ಟು ಮದುಮಗನೊಬ್ಬ ಮುಸ್ಲಿಂ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ಆರೋಪಿತರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆಯಲ್ಲಿ ಈ ಘಟನೆ ನಡೆದಿದೆ. ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ಅಝೀಝ್ ಪುತ್ರಿಯ ವಿವಾಹ ಮಧ್ಯಾಹ್ನ ನಡೆದಿತ್ತು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ಯುವಕರ ಗುಂಪು ಮದುಮಗನಿಗೆ ವಿಶಿಷ್ಟವಾಗಿ ಶೃಂಗರಿಸಿ, ಕರೆತಂದಿದ್ದರು.
ಆದರೆ ತಲೆಗೆ ಹಾಳೆಯ ಮುಂಡಾಸು, ಮುಖಕ್ಕೆ ಕಪ್ಪು ಮಸಿ ಹಾಕಿ, ಕುಣಿಯುತ್ತಾ ಬಂದಿದ್ದು ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿದಾಡಿದ್ದಾರೆ. ಕೊರಗಜ್ಜನ ವೇಷದ ಮಾದರಿಯಲ್ಲಿ ಮುಖಕ್ಕೆ ಮಸಿ ಬಳಿದು ಕುಣಿದಿದ್ದು ಕೊರಗಜ್ಜ ದೈವ ಮತ್ತು ಕೊರಗ ಸಮುದಾಯವನ್ನು ಅಣಕ ಮಾಡಿದಂತಾಗಿದೆ ಎನ್ನುವ ಮಾತು ಕೇಳಿಬಂದಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಜಾಲತಾಣಗಳಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ನವರಾತ್ರಿ ಸಂದರ್ಭದಲ್ಲಿ ಕೊರಗರ ವೇಷ ಹಾಕುವ ಪದ್ಧತಿ ಇತ್ತು. ಬಳಿಕ ಅದನ್ನು ಸಮುದಾಯದ ನಿಂದನೆ ಅನ್ನುವ ನೆಲೆಯಲ್ಲಿ ನಿಷೇಧಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post