ಕೋಲ್ಕತ: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್ ಬದ್ಯಕರ್ ಸೋಮವಾರ (ಫೆ.28) ರಾತ್ರಿ ಕಾರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಚ್ಚಾ ಬಾದಾಮ್ ಹಾಡಿನ ಮೂಲಕ ಗಳಿಸಿದ ಹಣದಲ್ಲಿ ಭುವನ್ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಕಾರು ಖರಿದೀಸಿದ್ದಾರೆ. ನಿನ್ನೆ ಕಾರು ಓಡಿಸುವುದನ್ನು ಕಲಿಯುವಾಗ ಅಪಘಾತವಾಗಿದ್ದು, ಎದೆಗೆ ನೋವಾಗಿದೆ. ಹೀಗಾಗಿ ಭುವನ್ ಅವರು ಸುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಶೀಘ್ರ ಗುಣಮುಖರಾಗಲು ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿದ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್ ರೀಮಿಕ್ಸ್ ಹಾಡೇ ಕಣ್ಣು ಮುಂದೆ ಮೊದಲು ಬರುತ್ತಿದೆ. ಇದೇ ಹಾಡನ್ನು ಕೇಳಿ ಕೇಳಿ ಸುಸ್ತಾದ ಎಷ್ಟೋ ಮಂದಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದಾರೆ. ಎಷ್ಟರಮಟ್ಟಿಗೆ ಈ ಹಾಡು ಹಿಟ್ ಆಗಿದೆ ಅಂದರೆ, ಯೂಟ್ಯೂಬ್ನಲ್ಲಿ ಬರೋಬ್ಬರಿ 50 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿನಿಂದ ಭುವನ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಕಚ್ಚಾ ಬಾದಾಮ್ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದರು. ಅವರ ಹಾಡನ್ನು ಗುರುತಿಸಿದ ಗೋಧುಲಿಬೆಲಾ ಮ್ಯೂಸಿಕ್ ಕಂಪನಿ ರೀಮಿಕ್ಸ್ ಮಾಡಿ, ಭುವನ್ ಕೈಯಲ್ಲೇ ಹಾಡಿಸಿದ್ದಾರೆ. ಇದಾದ ಬಳಿಕ ಭುವನ್ ಬದುಕೇ ಬದಲಾಗಿದೆ.
ಕಚ್ಚಾ ಬಾದಾಮ್ ಒರಿಜಿನಲ್ ಸಾಂಗ್ ಅನ್ನು ರೀಮಿಕ್ಸ್ ಮಾಡಲು ಸಂಭಾವನೆಯಾಗಿ ಭುವನ್ಗೆ 3 ಲಕ್ಷ ರೂ. ನೀಡಲಾಗಿದೆ ಎಂದು ತಿಳಿದುಬಂದಿದೆ. ಕಡಲೆಕಾಯಿ ಮಾರಾಟ ಮಾಡಿ ದಿನದೂಡುತ್ತಿದ್ದ ಭುವನ್ ಇದೀಗ ಕಚ್ಚಾ ಬಾದಾಮ್ ಮೂಲಕ ಖ್ಯಾತಿಯಾಗಿದ್ದು, ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಲಕ್ ಬದಲಾಗಿದೆ. ಆದರೆ, ಇದೀಗ ಅಪಘಾತವಾಗಿರುವುದು ಕುಟುಂಬಸ್ಥರಿಗೆ ಆಘಾತವಾಗಿದ್ದು, ಸದ್ಯ ಭುವನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.