ಮಂಗಳೂರು: ಮಂಗಳೂರಿನ 64 ವರ್ಷದ ಮಹಿಳಾ ಕ್ರೀಡಾಪಟು ಭವಾನಿ ಜೋಗಿ ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ 35ನೇ ವಾರ್ಷಿಕ ಮಾಸ್ಟರ್ಸ್ (ಒಪನ್) ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆಲ್ಲುವುದರೊಂದಿಗೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇಷ್ಟೇ ಅಲ್ಲ, ಈವರೆಗೂ ಫೀಲ್ಡ್ ಮತ್ತು ಟ್ರ್ಯಾಕ್ ಸ್ಪರ್ಧೆಗಳಲ್ಲಿ 200ಕ್ಕೂ ಅಧಿಕ ಪದಕಗಳನ್ನು ಗೆದಿದ್ದಾರೆ.
ವೃತ್ತಿಯಲ್ಲಿ ನರ್ಸ್ ಆಗಿರುವ ಭವಾನಿ ಮೂಲತ: ಹಾಸನ ಜಿಲ್ಲೆ ಸಕಲೇಶಪುರದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರೂ ಮನೆಯಲ್ಲಿನ ನಿರ್ಬಂಧದಿಂದಾಗಿ ಅದನ್ನು ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ಮದುವೆ ನಂತರ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ಆರಂಭಿಸಿದ ಅವರು, ವಯಸ್ಸು ಎಂಬುದು ಅಂಕಿ ಮಾತ್ರ, ಒಬ್ಬರು ಎಷ್ಟು ಕಾಲ ಬದುಕುತ್ತಾರೆ ಎಂಬುದನ್ನು ಲೆಕ್ಕ ಹಾಕಬಾರದು, ಬದಲಿಗೆ ಒಬ್ಬನು ತನ್ನ ಜೀವನದಲ್ಲಿ ಸಾಧಿಸುವ ಎಲ್ಲಾ ಸಂತೋಷದ ಬಗ್ಗೆ ನಿಗಾ ಇಡಬೇಕು ಎಂದು ಅಭಿಪ್ರಾಯ ಪಡುತ್ತಾರೆ.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ 1982ರಲ್ಲಿ ನರ್ಸ್ ಆಗಿ ಮೊದಲ ಬಾರಿಗೆ ಕರ್ತವ್ಯಕ್ಕೆ ನಿಯೋಜನೆಯಾದ ಮರು ವರ್ಷವೇ ವಿವಾಹವಾಯಿತು. ಎರಡು ವರ್ಷಗಳ ನಂತರ ಹೆಣ್ಣು ಮಗುವೊಂದು ಹುಟ್ಟಿತು. ಮಗು ಹುಟ್ಟಿದ ನಂತರ ತಮ್ಮ ಇಲಾಖೆಯಲ್ಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಇದಕ್ಕೆ ನಮ್ಮ ಪತಿ ಹಾಗೂ ಅತ್ತೆಯ ಬೆಂಬಲವಿತ್ತು ಎಂದು ಭವಾನಿ ಜೋಗಿ ಹೆಮ್ಮೆಯಿಂದ ಹೇಳುತ್ತಾರೆ.
ದೈಹಿಕ ಶಿಕ್ಷಕ ಪುರುಷೋತ್ತಮ್ ಪದಕನ್ನಯ್ಯ ಅವರಿಂದ ಆರಂಭಿಕ ತರಬೇತಿ ಪಡೆದಿರುವ ಭವಾನಿ ಜೋಗಿ, ಥ್ರೋಯಿಂಗ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಅವರು ಸ್ಥಳಾಂತರಗೊಂಡು ಅಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಕೆಲಸದಿಂದಾಗಿ ಬೆಳಗ್ಗೆ ಹೊತ್ತು ಅಭ್ಯಾಸ ಮಾಡಲು ಆಗುತ್ತಿರಲಿಲ್ಲ. ಜಾಗಿಂಗ್ ಮತ್ತಿತರ ಸಣ್ಣಪುಟ್ಟ ವ್ಯಾಯಾಮ ಮಾಡುತ್ತಿದ್ದೆ. 1989ರಲ್ಲಿ ಪತಿ ತೀರಿಕೊಂಡಾಗ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೆ, ಅದೃಷ್ಟವಶಾತ್ ತಮ್ಮ ಕುಟುಂಬಸ್ಥರು, ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಬೆಂಬಲದಿಂದ ಕ್ರೀಡೆಗೆ ಮತ್ತೆ ಮರಳಿದ್ದಾಗಿ ಭವಾನಿ ನೆನಪಿಸಿಕೊಳ್ಳುತ್ತಾರೆ.
ಭವಾನಿ ಅದ್ಬುತ ಯಕ್ಷಗಾನ ಕಲಾವಿದರು ಕೂಡಾ ಹೌದು. ಕುಬ್ಳೆ ಸುಂದರ್ ರಾವ್ ಅವರ ಸಹೋದರ ಉಪ್ಪಾಳ ಕೃಷ್ಣ ಮಾಸ್ಟರ್ ಅವರ ಮಾರ್ಗದರ್ಶನದಡಿ 1996ರಲ್ಲಿ ರಾಜ್ಯ ಮಟ್ಟದ ನರ್ಸ್ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ್ದರು. ಬಬ್ರುವಾಹನ ವಿಜಯ ಪ್ರಸಂಗದಲ್ಲಿನ ಅನುಸಾಳ್ವ ಪಾತ್ರದ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಮಂಗಳೂರಿನ ಕರಾವಳಿ ಉತ್ಸವದಲ್ಲೂ ಅವರು ಪ್ರದರ್ಶನ ನೀಡಿದ್ದಾರೆ.
ಭವಾನಿ ಜೋಗಿ ಈಜುಪಟು ಆಗಿದ್ದು, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕ ಗಳಿಸಿದ್ದಾರೆ. 40 ವರ್ಷದಲ್ಲಿ ತನ್ನ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪುತ್ರಿಯೊಂದಿಗೆ ಅವರು ಈಜು ಕಲಿತಿದ್ದಾರೆ. ಈಜು ಕಲಿತ ಕೇವಲ ನಾಲ್ಕೇ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿಗೆ ಆಯ್ಕೆಯಾಗಿ, 40 ವರ್ಷಕ್ಕೂ ಮೇಲ್ಪಟ್ಟವರ ಈಜು ಸ್ಪರ್ಧೆಯಲ್ಲಿ 3 ಚಿನ್ನ ಗಳಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಈಜುಕೊಳದ ಈಜು ತರಬೇತಿದಾರರಾಗಿಯೂ ಕೆಲಸ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post